ಪಾಕ್‌ ಬೆಂಬಲಿಸಿದ ಅಜೆರ್ಬೈಜಾನ್‌ಗೆ ಬೇಜಾರ್‌ ತಂದ ಭಾರತ!

ವಾಷಿಂಗ್ಟನ್: ಪಾಕಿಸ್ತಾನಕ್ಕೆ ನೀಡಿದ ಬೆಂಬಲದ ಹಿನ್ನೆಲೆಯಲ್ಲಿ ಭಾರತವು ಅಜೆರ್ಬೈಜಾನ್ ವಿರುದ್ಧ ಜಾಗತಿಕ ವೇದಿಕೆಗಳಲ್ಲಿ ಸೇಡು ತೀರಿಸಿಕೊಳ್ಳುತ್ತಿದೆ ಎಂಬ ಆರೋಪ ಅಲ್ಲಿನ ರಾಜಧಾನಿ ಬಾಕುವಿನಿಂದ ಹೊರಬಂದಿದೆ. ಶಾಂಘೈ ಸಹಕಾರ ಸಂಘಟನೆಗೆ (SCO) ಪೂರ್ಣ ಸದಸ್ಯತ್ವ ಪಡೆಯುವ ಅಜೆರ್ಬೈಜಾನ್‌ ಸಲ್ಲಿಸಿದ ಅರ್ಜಿಯನ್ನು ಭಾರತ ನಿರ್ಬಂಧಿಸಿದೆ ಎಂದು ಅಜೆರ್ಬೈಜಾನಿ ಮಾಧ್ಯಮಗಳು ವರದಿ ಮಾಡಿವೆ.

Azerbaijani President Ilham Aliyev
Azerbaijani President Ilham Aliyev

ಶಾಂಘೈ ಸಹಕಾರ ಸಂಸ್ಥೆ (SCO) ಚೀನಾ ಹಾಗೂ ರಷ್ಯಾ ನೇತೃತ್ವದ ಪ್ರಭಾವಿ ಪ್ರಾದೇಶಿಕ ವೇದಿಕೆಯಾಗಿದೆ. ಭಾರತವು 2017ರಿಂದ ಇದರ ಪೂರ್ಣ ಸದಸ್ಯ ರಾಷ್ಟ್ರವಾಗಿದೆ. ಅಜೆರ್ಬೈಜಾನ್ ಇತ್ತೀಚೆಗೆ ಪೂರ್ಣ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ಭಾರತದ ವಿರೋಧದಿಂದಾಗಿ ಅದನ್ನು ಅಂಗೀಕರಿಸಲಾಗಿಲ್ಲವೆಂದು ಅಜೆರ್ಬೈಜಾನಿ ಟಿವಿ ವಾಹಿನಿ ANEWSZ ವರದಿ ಮಾಡಿದೆ.

ಪಾಕ್ ಪರ ಬೆಂಬಲವೇ ಮೂಲ ಕಾರಣ!
ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್, ಈ ವರ್ಷದ ಆರಂಭದಲ್ಲಿ ಚೀನಾದ ಟಿಯಾಂಜಿನ್‌ನಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಿ, ಭಾರತದ ವಿರುದ್ಧ ಪಾಕಿಸ್ತಾನ ಸಾಧಿಸಿದೆ ಎಂದು ನಂಬಿಕೊಂಡು ಅಭಿನಂದನೆ ಸಲ್ಲಿಸಿದ್ದರು. ಅಲ್ಲದೆ, ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಅಜೆರ್ಬೈಜಾನ್ ಬಹಿರಂಗವಾಗಿ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿತ್ತು.
ಇದೇ ಕಾರಣಕ್ಕೆ ಈಗ SCO ಸದಸ್ಯತ್ವದ ಅರ್ಜಿಯನ್ನು ಭಾರತ ತಡೆದು ತನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಬಾಕು ಗಂಭೀರ ಆರೋಪಿಸಿದೆ.

ಭಾರತವು ಬಹುಪಕ್ಷೀಯ ರಾಜತಾಂತ್ರಿಕತೆಯ ತತ್ವಗಳನ್ನು ಉಲ್ಲಂಘಿಸಿದೆ ಎಂದು ಅಜೆರ್ಬೈಜಾನಿ ಮಾಧ್ಯಮಗಳು ಹೇಳಿವೆ. ಭಾರತ–ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವುದು ಆತಂಕಕಾರಿ. ಶಾಂತಿ ಮತ್ತು ಸಹಕಾರಕ್ಕೆ ನಾವು ಬದ್ಧರಾಗಿದ್ದೇವೆಎಂದು ಅಜೆರ್ಬೈಜಾನ್ ಸರ್ಕಾರ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಅಲಿಯೆವ್ ಸರ್ಕಾರವು ಪಾಕಿಸ್ತಾನದೊಂದಿಗೆ ರಾಜಕೀಯ, ಸಾಂಸ್ಕೃತಿಕ ಹಾಗೂ ಕಾರ್ಯತಂತ್ರದ ಸಂಬಂಧಗಳನ್ನು ‘ಸಹೋದರತ್ವದ’ ಮಟ್ಟಕ್ಕೆ ಏರಿಸಿಕೊಂಡಿದೆ. ವ್ಯಾಪಾರ–ಆರ್ಥಿಕ ಸಹಕಾರ ವಿಸ್ತರಣೆಗೂ ಬಾಕು–ಇಸ್ಲಾಮಾಬಾದ್ ಮಾತುಕತೆ ನಡೆಸಿವೆ.

ಅಜೆರ್ಬೈಜಾನ್‌ನ SCO ಸದಸ್ಯತ್ವ ಅರ್ಜಿಯನ್ನು ಭಾರತ ನಿರ್ಬಂಧಿಸಿದೆ ಎಂಬ ವರದಿ ಹೊಸ ರಾಜತಾಂತ್ರಿಕ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನಕ್ಕೆ ನೀಡಿದ ಬೆಂಬಲವೇ ನವದೆಹಲಿಯ ವಿರೋಧಕ್ಕೆ ಹಿನ್ನೆಲೆ ಎಂಬ ಬಾಕುವಿನ ಆರೋಪವು ಈಗ ಭಾರತ–ಅಜೆರ್ಬೈಜಾನ್ ಸಂಬಂಧಗಳಿಗೆ ಮತ್ತಷ್ಟು ಗಂಭೀರತೆ ತಂದಿದೆ.

error: Content is protected !!