ಅದ್ಭುತ ಆವಿಷ್ಕಾರ! ಮಂಗಳ ಗ್ರಹದ ಆಳದಲ್ಲಿ ಅನ್ಯಗ್ರಹದ ಶಿಲಾಪಿಂಡ ಪತ್ತೆ!

ವಾಷಿಂಗ್ಟನ್‌: ಮಂಗಳ ಗ್ರಹದ ಆಳದ ಮ್ಯಾಂಟಲ್‌(ಕಂದಕ)ನಲ್ಲಿ ಕೋಟ್ಯಂತರ ವರ್ಷಗಳ ಹಿಂದೆ ಮಹಾ ಗ್ರಹವೊಂದು ಢಿಕ್ಕಿ ಹೊಡೆದಿದ್ದು, ಇದರ ಅವಶೇಷ ಅಂದರೆ ಶಿಲಾಪಿಂಡವನ್ನು ನಾಸಾ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇನ್‌ಸೈಟ್‌ ಲ್ಯಾಂಡರ್‌ನಿಂದ ದೊರೆತ ಅಮೂಲ್ಯ ಭೂಕಂಪನ (ಮಾರ್ಸ್‌ಕ್ವೇಕ್‌) ಮಾಹಿತಿಯ ಆಧಾರದ ಮೇಲೆ ವಿಜ್ಞಾನಿಗಳು ಈ ಮಹತ್ತರ ಆವಿಷ್ಕಾರ ಮಾಡಿದ್ದಾರೆ.

Marsquake Data Uncovers “Lumpy” Martian Interior Shaped by Ancient Impacts

ಸೈನ್ಸ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಮಂಗಳದಲ್ಲಿ ಎಂಟು ಪ್ರಬಲವಾದ ಮಾರ್ಸ್‌ಕ್ವೇಕ್‌ (ಮಂಗಳನ ಭೂಕಂಪ) ಸಂಭವಿಸಿದೆ. ಈ ಕಂಪನಗಳನ್ನು ವಿಶ್ಲೇಷಿಸಿದ ವಿಜ್ಞಾನಿಗಳಿಗೆ ಮಂಗಳನ ಒಳಭಾಗ(ಅಂತರಾಳ)ವನ್ನು ಮೊದಲ ಬಾರಿಗೆ ಇಷ್ಟು ಸೂಕ್ಷ್ಮವಾಗಿ ವಿಶ್ಲೇಷಿಸಲು ಸಾಧ್ಯವಾಯಿತು.

ಅದರಲ್ಲಿ 2.5 ಮೈಲುಗಳಷ್ಟು ದೊಡ್ಡ ಶಿಲಾ ಅವಶೇಷಗಳು ಮಂಗಳನ ಆಳದಲ್ಲೇ ಹೂತುಹಾಕಲ್ಪಟ್ಟಿರುವುದು ಕಂಡುಬಂದಿದೆ. ಇವು ನಾಲ್ಕು ಬಿಲಿಯನ್‌ ವರ್ಷಗಳ ಹಿಂದಿನ ಭಾರೀ ಉಲ್ಕಾಪಾತ ಹಾಗೂ ಗ್ರಹಗಳ ಢಿಕ್ಕಿಯ ಅವಶೇಷಗಳೆಂದು ತಜ್ಞರು ತಿಳಿಸಿದ್ದಾರೆ.

ಭೂಮಿಯಲ್ಲಿ ಪ್ಲೇಟ್ ಟೆಕ್ಟಾನಿಕ್ಸ್‌ನ ಚಟುವಟಿಕೆಗಳಿಂದ ಹಳೆಯ ಉಲ್ಕಾಪಾತಗಳ ಗುರುತು ಅಳಿದು ಹೋಗುತ್ತದೆ. ಆದರೆ ಮಂಗಳನಲ್ಲಿ ಆ ರೀತಿಯ ಭೂಗರ್ಭ ಚಟುವಟಿಕೆಗಳಿಲ್ಲದ ಕಾರಣ, ಅದರ ಆಂತರಿಕ ರಚನೆ ಬಹುತೇಕ ಬದಲಾಗದೇ ಉಳಿದಿದೆ. ಅದರಿಂದಲೇ ಇದು ಮಂಗಳನ ಪ್ರಾರಂಭಿಕ ಇತಿಹಾಸದ ಜೀವಂತ ಸಾಕ್ಷಿಯಂತಿದೆ.

2018ರಿಂದ 2022ರವರೆಗೆ ಕಾರ್ಯನಿರ್ವಹಿಸಿದ ಇನ್‌ಸೈಟ್‌ ಮಿಷನ್‌ 1,300ಕ್ಕೂ ಹೆಚ್ಚು ಮಾರ್ಸ್‌ಕ್ವೇಕ್‌ಗಳನ್ನು ದಾಖಲಿಸಿತ್ತು. ಅವುಗಳಿಂದ ಹೊರಬಂದ ಭೂಕಂಪ ಅಲೆಗಳ ವೇಗದಲ್ಲಿ ಕಂಡ ಬದಲಾವಣೆಗಳು, ಮಂಗಳನ ಮ್ಯಾಂಟಲ್‌ನಲ್ಲಿ ಶಿಲಾ ಅವಶೇಷಗಳಿರುವುದನ್ನು ದೃಢಪಡಿಸಿದವು.

“ಮಂಗಳನ ಒಳಭಾಗವನ್ನು ಇಷ್ಟೊಂದು ಸ್ಪಷ್ಟವಾಗಿ ನಾವು ಎಂದಿಗೂ ನೋಡಿರಲಿಲ್ಲ. ಮ್ಯಾಂಟಲ್‌ನೊಳಗೆ ಪುರಾತನ ಶಿಲಾ ತುಂಡುಗಳು ಇನ್ನೂ ಉಳಿದಿರುವುದು, ಮಂಗಳನ ಆಂತರಿಕ ಬೆಳವಣಿಗೆ ಬಹಳ ನಿಧಾನವಾಗಿದೆ ಎಂಬುದನ್ನು ತೋರಿಸುತ್ತದೆ,” ಎಂದು ಸಂಶೋಧನೆಯ ಪ್ರಮುಖ ಲೇಖಕ ಕಾನ್ಸ್ಟಾಂಟಿನೋಸ್‌ ಚಾರಾಲಂಬಸ್‌ (ಇಂಪೀರಿಯಲ್‌ ಕಾಲೇಜ್‌ ಲಂಡನ್‌) ತಿಳಿಸಿದ್ದಾರೆ.

“ಮಂಗಳ ಒಂದು ಕಾಲಕೋಶ ಎಂಬುದು ನಮಗೆ ತಿಳಿದಿದ್ದರೂ, ಇನ್‌ಸೈಟ್‌ನಿಂದ ಇಷ್ಟೊಂದು ಸ್ಪಷ್ಟವಾಗಿ ಕಾಣುತ್ತದೆ ಎಂದು ಊಹಿಸಿರಲಿಲ್ಲ,” ಎಂದು ಸಹಲೇಖಕ ಟಾಮ್‌ ಪೈಕ್‌ ಹೇಳಿದ್ದಾರೆ.

error: Content is protected !!