ಮಂಗಳೂರು: “ಜಿಲ್ಲೆಗೆ ಎಸ್ಯಾಸಾಫ್ಟ್ ನಂತಹ ಕಂಪೆನಿಗಳು ಬರುವ ಮೂಲಕ ಯುವಜನತೆಗೆ ಆಶಾಕಿರಣವಾಗಿದೆ. ಇಂತಹ ಐಟಿ ಕಂಪೆನಿಗಳಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಜಿಲ್ಲಾಡಳಿತ ಎಂದಿಗೂ ನಿಮ್ಮ ಜೊತೆಗೆ ಇದೆ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಶುಭವಾಗಲಿ” ಎಂದು ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಹೇಳಿದರು. ಅವರು ಬಜ್ಪೆ ಸಮೀಪದ ಸುಂಕದಕಟ್ಟೆಯಲ್ಲಿ ನೂತನವಾಗಿ ಆರಂಭಗೊಂಡ ಏಸ್ಯಾಸಾಫ್ಟ್ ಐಟಿ ಸಂಸ್ಥೆ ಉದ್ಘಾಟಿಸಿ ಮಾತಾಡಿದರು.
ಬಳಿಕ ಮಾತಾಡಿದ ಮೂಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು, “ಭಾರತದ ಪ್ರತೀ ಹಳ್ಳಿಗಳು ಬೆಳೆದಾಗ ಭಾರತ ಬೆಳೆಯುತ್ತದೆ. ಯುವಜನತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಯು ಬಜ್ಪೆಯ ಗ್ರಾಮೀಣ ಭಾಗದಲ್ಲಿ ತೆರೆದು ವಿದ್ಯಾವಂತ ಯುವಕ ಯುವತಿಯರಿಗೆ ಕೆಲಸ ನೀಡುವ ಜೊತೆಗೆ ಇಲ್ಲಿಯೇ ಅವರನ್ನು ತರಬೇತಿ ಕೊಟ್ಟು ಅವರ ಭವಿಷ್ಯಕ್ಕೆ ಬೆನ್ನೆಲುಬಾಗಿ ನಿಲ್ಲುವ ಮಹತ್ತರ ಕಾರ್ಯಕ್ಕೆ ಮುಂದಾಗಿದೆ. ಮಂಗಳೂರಿನಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲಿ ಇನ್ನಷ್ಟು ಸಂಸ್ಥೆಗಳು ಇವರಿಂದ ಭವಿಷ್ಯದಲ್ಲಿ ನಿರ್ಮಾಣವಾಗಲಿ“ ಎಂದು ಶುಭ ಹಾರೈಸಿದರು.
ಪದ್ಮರಾಜ್ ಆರ್. ಮಾತಾಡಿ, ”ವಿಶ್ವದ ಅತೀ ದೊಡ್ಡ ಸಾಫ್ಟ್ ವೇರ್ ಕಂಪೆನಿಗಳಲ್ಲಿ ಒಂದಾಗಿರುವ ಏಸ್ಯಾಸಾಫ್ಟ್ ಕಂಪೆನಿ ಮಂಗಳೂರಿಗೆ ಬಂದಿರುವುದು ಖುಷಿಯ ವಿಚಾರ. ವರ್ಷಕ್ಕೆ 7-8 ಸಾವಿರ ಉದ್ಯೋಗಿಗಳು ಈ ಸಂಸ್ಥೆಯಿಂದ ಸಮಾಜಕ್ಕೆ ಅರ್ಪಣೆಯಾಗಲಿದ್ದಾರೆ. ಇದು ನಮಗೆ ಹೆಮ್ಮೆ ತರುವಂತದ್ದು. ರಾಜ್ಯ ಸರಕಾರ ನಮ್ಮ ಕರಾವಳಿ ಅಭಿವೃದ್ಧಿಗಾಗಿ ಪ್ರತ್ಯೇಕ ಯೋಜನೆ ರೂಪಿಸಲು ಈಗಾಗಲೇ ಮುಂದಾಗಿದೆ. ಇಂತಹ ಸಂಸ್ಥೆ ಇನ್ನಷ್ಟು ಬರಲಿ“ ಎಂದರು.
ಏಸ್ಯಾಸಾಫ್ಟ್ ಸಂಸ್ಥಾಪಕ ಬಿಪಿನ್ ಚಂದ್ರ ಮಾತನಾಡಿ, “ಭಾರತವು 2030ರೊಳಗೆ 500 ಗಿಗಾವಾಟ್ ನವೀಕರಿಸಬಹುದಾದ ಶಕ್ತಿ ಉತ್ಪಾದನೆ ಮಾಡುವ ಗುರಿ ಹೊಂದಿದೆ. ಇಂಧನ, ವಿದ್ಯುತ್ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ತಾಂತ್ರಿಕ ಪರಿಣಿತರ ಅವಶ್ಯಕತೆ ದಿನೇದಿನೇ ಹೆಚ್ಚುತ್ತಿದೆ. ಏಸ್ಯಾಸಾಫ್ಟ್ ಹಲವು ತಾಂತ್ರಿಕ ತರಬೇತಿ ಕಾರ್ಯಕ್ರಮಗಳು, ಡೆವಲಪ್‌ಮೆಂಟ್ ಮತ್ತು ಉದ್ಯೋಗಾವಕಾಶಗಳನ್ನು ಘೋಷಿಸಿದೆ. ಕೃತಕ ಬುದ್ಧಿಮತ್ತೆ (AI), ಇಂಟರ್ನೆಟ್ ಆಫ್ ಥಿಂಗ್ಸ್ (IoT), ಎಲೆಕ್ಟ್ರಿಕ್ ವಾಹನಗಳು (EV), ಬ್ಯಾಟರಿ ತಂತ್ರಜ್ಞಾನ ಮತ್ತು ಬ್ಲಾಕ್‌ಚೇನ್ ಕ್ಷೇತ್ರಗಳಲ್ಲಿ ಸಂಸ್ಥೆ ವಿಶೇಷ ಗಮನ ಹರಿಸಿದೆ” ಎಂದರು.
ಜಾಗತಿಕ ಮಟ್ಟದಲ್ಲೂ ವಿಸ್ತರಣೆ
ಸಂಸ್ಥೆಯ ಪ್ರಕಟಣೆಯ ಪ್ರಕಾರ, ದೇಶದ IIT ಮತ್ತು NIT ಗಳ ವಿದ್ಯಾರ್ಥಿಗಳು ಈಗಾಗಲೇ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಜಾಗತಿಕ ಮಟ್ಟದಲ್ಲಿಯೂ ಸಂಸ್ಥೆಯು ತನ್ನ ಪರಿಹಾರಗಳನ್ನು ವಿಸ್ತರಿಸಿ ಸಾವಿರಾರು ಇಂಜಿನಿಯರ್‌ಗಳಿಗೆ ಉದ್ಯೋಗ ಒದಗಿಸುತ್ತಿದೆ. ಮಂಗಳೂರಿನಲ್ಲಿ ಪ್ರಾರಂಭವಾದ ಈ ಐಟಿ ಸಂಸ್ಥೆಯು ಮುಂದಿನ ದಿನಗಳಲ್ಲಿ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಕಾರ್ಯಕ್ರಮದಲ್ಲಿ ಪ್ರಮೀಳಾ ಕ್ರಾಸ್ತ, ಕಂದಾವರ ಪಂಚಾಯತ್ ಅಧ್ಯಕ್ಷೆ ಶಾಲಿನಿ ಮತ್ತಿತರರು ಉಪಸ್ಥಿತರಿದ್ದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19