ಡಾ||ಎಂ.ಎನ್.ರಾಜೇಂದ್ರ ಕುಮಾರ್ ನಿರ್ಮಾಣದ ʻಡಾಕ್ಟ್ರಾ ಭಟ್ರಾ?ʼ ತುಳು ಸಿನಿಮಾಕ್ಕೆ ಮುಹೂರ್ತ

ಮಂಗಳೂರು: ಎಂ.ಎನ್.ಆರ್. ಪ್ರೊಡಕ್ಷನ್ ಲಾಂಛನದಡಿಯಲ್ಲಿ ಡಾ|| ಎಂ. ಎನ್. ರಾಜೇಂದ್ರ ಕುಮಾರ್ ನಿರ್ಮಾಣ ಮತ್ತು ವಿಜಯ್‌ ಕುಮಾರ್‌ ಕೊಡಿಯಾಲ್‌ ಬೈಲ್‌ ನಿರ್ದೇಶನದಲ್ಲಿ ಮೂಡಿಬರಲಿರುವ ʻಡಾಕ್ಟ್ರಾ ಭಟ್ರಾ?ʼ ತುಳು ಸಿನಿಮಾದ ಮುಹೂರ್ತ ಸಮಾರಂಭ ಆದಿತ್ಯವಾರ ಬೆಳಗ್ಗೆ ಕದ್ರಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಡೆಯಿತು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್‌, ಎಜೆ ಮೆಡಿಕಲ್‌ ಕಾಲೇಜಿನ ಎಜೆ ಶೆಟ್ಟಿ, ಡಾ|| ಎಂ. ಎನ್. ರಾಜೇಂದ್ರ ಕುಮಾರ್ ಕೆಮರಾ ಚಾಲನೆ ಮಾಡಿ ಸಿನಿಮಾಕ್ಕೆ ಶುಭ ಹಾರೈಸಿದರು.


ಬಳಿಕ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಡಾ|| ಎಂ. ಎನ್. ರಾಜೇಂದ್ರ ಕುಮಾರ್ ಅವರು, ʻನಮ್ಮ ಎಂ.ಎನ್.ಆರ್. ಪ್ರೊಡಕ್ಷನ್ ನಿಂದ 2009ರಲ್ಲಿ “ಜೋಗುಳ” ಎಂಬ ಮೆಗಾ ಧಾರಾವಾಹಿ ನಿರ್ಮಿಸಲಾಗಿತ್ತು. ವಿನು ಬಳಂಜ ಅವರ ನಿರ್ದೇಶನದಲ್ಲಿ ಸುಮಾರು 600 ಕಂತುಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ಈ ಧಾರಾವಾಹಿಯು ಜನಮೆಚ್ಚುಗೆಯನ್ನು ಪಡೆದಿರುತ್ತದೆ. ಹಾಗೆನೇ ಪ್ರತಿಭಾವಂತ ನಿರ್ದೇಶಕ ಎಂ.ಡಿ. ಶ್ರೀಧರ್ ಅವರ ನಿರ್ದೇಶನದಲ್ಲಿ “ಗಲಾಟೆ” ಎಂಬ ಸಿನಿಮಾ ಪ್ರಜ್ವಲ್‌ ದೇವರಾಜ್ ಹಾಗೂ ಬಹುತಾರಾಗಣದಲ್ಲಿ ನಿರ್ಮಾಣವಾಗಿತ್ತು. ಈಗ ವಿಜಯ್‌ ಕುಮಾರ್‌ ಕೊಡಿಯಾಲ್‌ ಬೈಲ್‌ ನಿರ್ದೇಶನದಲ್ಲಿ ಒಂದೊಳ್ಳೆ ಹಾಸ್ಯ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದೇನೆ. ತುಳುವರು ತುಳು ಸಿನಿಮಾಗಳಿಗೆ ಪ್ರೋತ್ಸಾಹ ಕೊಡಿʼ ಎಂದರು.


ಎಜೆ ಶೆಟ್ಟಿಯವರು ಮಾತಾಡಿ ʼತುಳುಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಿನಿಮಾವನ್ನು ತುಳುಭಾಷೆಯಲ್ಲಿ ನಿರ್ಮಿಸಲು ಮುಂದಾಗಿದ್ದಾರೆ. ತುಳು ರಂಗಭೂಮಿಯ ಕ್ರಿಯಾಶೀಲ ಹಾಗೂ ವಿಭಿನ್ನ ಯೋಚನೆಯ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್‌ ಬೈಲ್ ಅವರ ಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದ್ದು ಜನರನ್ನು ರಂಜಿಸುವುದರಲ್ಲಿ ಸಂಶಯವಿಲ್ಲʼ ಎಂದರು.
ವಿಜಯಕುಮಾರ್ ಕೊಡಿಯಾಲ್‌ ಬೈಲ್ ಮಾತಾಡಿ, ʻಇದೊಂದು ಸಂಪೂರ್ಣ ಹಾಸ್ಯ ಸಿನಿಮಾ, ವಿಭಿನ್ನ ಕಥಾಹಂದರವನ್ನು ಹೊಂದಿದ್ದು ವಿಜ್ಞಾನ ಮತ್ತು ಆಚಾರ-ವಿಚಾರಗಳ ಸಂಘರ್ಷದಲ್ಲಿ ಕಥೆ ಹೆಣೆಯಲ್ಪಟ್ಟಿರುತ್ತದೆ. ಉತ್ತಮ ಸಂದೇಶದೊಂದಿಗೆ ಸಂಪೂರ್ಣ ಮನೋರಂಜನಾತ್ಮಕ ಚಿತ್ರ ಇದಾಗಿದ್ದು, ತುಳು ಚಿತ್ರರಂಗ ಮತ್ತು ತುಳು ರಂಗಭೂಮಿಯ ಜನಪ್ರಿಯ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತದ ಸಾರಥ್ಯ ವಹಿಸಲಿದ್ದಾರೆ. ಮಂಗಳೂರು ಹೊರವಲಯದ ನೀರ್‌ ಮಾರ್ಗದಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಸಿನಿಮಾದಲ್ಲಿ ನವೀನ್‌ ಡಿ ಪಡೀಲ್‌ ಭಟ್ರ್‌ ಪಾತ್ರವನ್ನು ಮಾಡಲಿದ್ದಾರೆʼ ಎಂದರು.


ಈ ಚಲನಚಿತ್ರದ ನಿರ್ಮಾಣ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರೇಮ್ ಶೆಟ್ಟಿ ಫಿಲ್ಮನ ಪ್ರೇಮ್ ಶೆಟ್ಟಿ ಸುರತ್ಕಲ್ ಮತ್ತು ಉದ್ಯಮಿ ಜಯಪ್ರಕಾಶ್ ತುಂಬೆ ಅವರು ವಹಿಸಲಿದ್ದಾರೆ. ಸಮಾರಂದಲ್ಲಿ ಪ್ರಕಾಶ್‌ ಪಾಂಡೇಶ್ವರ್‌, ಡಾ.ದೇವದಾಸ್‌ ಕಾಪಿಕಾಡ್‌, ಜಗನ್ನಾಥ ಶೆಟ್ಟಿ ಬಾಳ, ಶರ್ಮಿಳಾ ಕಾಪಿಕಾಡ್, ಆರ್‌.ಧನರಾಜ್‌, ಕೆ.ಕೆ.ಪೇಜಾವರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!