ಭದ್ರಾವತಿ: 9 ಒಂಭತ್ತು ವರ್ಷಗಳ ಹಿಂದೆ ಭದ್ರಾವತಿಯಲ್ಲಿ ನಡೆದಿದ್ದ ಶಿಕ್ಷಕ ಇಮ್ತಿಯಾಝ್ ಅಹ್ಮದ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಅವರ ಪತ್ನಿ ಶಿಕ್ಷಕಿ ಎಸ್. ಲಕ್ಷ್ಮಿ(29) ಮತ್ತು ಆಕೆಯ ಪ್ರಿಯಕರ ಕೃಷ್ಣಮೂರ್ತಿ(30)ಗೆ ಮರಣದಂಡನೆ ವಿಧಿಸಿ ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಇನ್ನೋರ್ವ ಆರೋಪಿ ಶಿವರಾಜ್(32)ಗೆ ನ್ಯಾಯಾಲಯವು ಏಳು ವರ್ಷ ಶಿಕ್ಷೆಯ ಜೊತೆಗೆ ದಂಡ ವಿಧಿಸಿದೆ.
2016ರ ಜುಲೈ 7ರಂದು ಭದ್ರಾವತಿಯ ಜನ್ನಾಪುರದಲ್ಲಿ ಶಿಕ್ಷಕ ಇಮ್ತಿಯಾಝ್ ಅಹ್ಮದ್ ಅವರನ್ನು ಭೀಕರವಾಗಿ ಕೊಲೆ ಮಾಡಿ ಮೃತದೇಹವನ್ನು ಭದ್ರಾ ನದಿಯಲ್ಲಿ ಎಸೆಯಲಾಗಿತ್ತು. ಜನ್ನಾಪುರದ ನಿವಾಸಿ ಲಕ್ಷ್ಮಿ 2011ರಲ್ಲಿ ಕಲಬುರಗಿಯಲ್ಲಿ ಸರಕಾರಿ ಶಾಲಾ ಶಿಕ್ಷಕಿಯಾಗಿದ್ದ ವೇಳೆ ಅಲ್ಲಿಯೇ ಶಿಕ್ಷಕರಾಗಿದ್ದ ಇಮ್ತಿಯಾಝ್ ಅಹ್ಮದ್ ರನ್ನು ಪ್ರೀತಿಸಿ ಮದುವೆಯಾಗಿದ್ದಳು. ನಂತರ ಶಿಕ್ಷಕ ದಂಪತಿ ಭದ್ರಾವತಿ ತಾಲೂಕಿಗೆ ವರ್ಗವಾಗಿ ಅಲ್ಲೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಓರ್ವ ಪುತ್ರನೂ ಇದ್ದ. ಆದರೆ ಈ ವೇಳೆ ಲಕ್ಷ್ಮೀಗೆ ಬಾಲ್ಯದ ಸ್ನೇಹಿತ ಚಾಲಕ ಕೃಷ್ಣಮೂರ್ತಿ ಜೊತೆ ಸ್ನೇಹ ಬೆಳೆದು ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಇದನ್ನು ಇಮ್ತಿಯಾಝ್ ವಿರೋಧಿಸಿದ್ದಕ್ಕೆ ಮೂವರು ಒಟ್ಟು ಸೇರಿ 2016ರ ಜುಲೈ 7ರಂದು ಜನ್ನಾಪುರದ ಮನೆಯಲ್ಲಿ ಬರ್ಬರವಾಗಿ ಕೊಲೆ ಕೊಲೆ ಮಾಡಿ ಮೃತದೇಹವನ್ನು ಭದ್ರಾ ನದಿಗೆ ಎಸೆದಿದ್ದರು.
ಭದ್ರಾವತಿಯ ನ್ಯೂ ಟೌನ್ ಪೊಲೀಸರು ಲಕ್ಷ್ಮಿ, ಕೃಷ್ಣಮೂರ್ತಿ ಹಾಗೂ ಶಿವರಾಜನನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ನಲ್ಲಿಸಿದ್ದರು. ವಿಚಾರಣೆ ನಡೆಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಲಕ್ಷ್ಮಿ ಹಾಗೂ ಕೃಷ್ಣಮೂರ್ತಿಗೆ ಮರಣದಂಡನೆ ಹಾಗೂ ಮತ್ತೊಬ್ಬ ಆರೋಪಿ ಶಿವರಾಜ್ಗೆ ಏಳು ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಲಕ್ಷ್ಮಿ ಜಾಮೀನಿನ ಮೇಲೆ ಬಿಡುಗಡೆಗೊಂಡು ಸದ್ಯ ಉರ್ದು ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿದ್ದಳು. ಭರತನಾಟ್ಯ, ಕೂಚಿಪುಡಿ ನೃತ್ಯ ಕಲಾವಿದೆಯಾಗಿ ಹೆಸರು ಮಾಡಿದ್ದಳು.