ಟೆಹ್ರಾನ್ ಮೇಲೆ ಅಗ್ನಿವರ್ಷ: ಇಸ್ರೇಲ್‌ನ ʻಶೀಲ್ಡ್ ಆಫ್ ಜುದಾ’ ಅಬ್ಬರಕ್ಕೆ ನಡುಗಿದ ಇರಾನ್! ಮಹಾಯುದ್ಧದ ಆರಂಭ!

ಟೆಹ್ರಾನ್/ಜೆರುಸಲೆಮ್: ಮುಂಜಾನೆಯ ಶಾಂತ ಪರಿಸರ, ಇರಾನ್‌ ಇಡೀ ನಗರವಿನ್ನೂ ಗಾಢ ನಿದ್ರೆಯಲ್ಲಿದೆ. ಅಷ್ಟರಲ್ಲೇ ಆಕಾಶದಿಂದ ಕೇಳಿಬಂದ ಭಯಾನಕ ಶಬ್ದವೊಂದು ಕಿವಿಗಡಚಿಕ್ಕುತ್ತದೆ. ಮರುಕ್ಷಣವೇ ಟೆಹ್ರಾನ್ ನಗರದ ದಿಗಂತದಲ್ಲಿ ಬೆಂಕಿಯ ಗೋಳಗಳು ಉರಿಯಲಾರಂಭಿಸುತ್ತವೆ. ಇದು ಸಿನಿಮಾ ಅಲ್ಲ, ಇಸ್ರೇಲ್ ಮತ್ತು ಇರಾನ್ ನಡುವಿನ ದಶಕಗಳ ಹಳೆಯ ದ್ವೇಷ ಈಗ ಜ್ವಾಲಾಮುಖಿಯಾಗಿ ಸ್ಫೋಟಗೊಂಡಿದೆ!

ನಿದ್ರೆಯಲ್ಲಿದ್ದ ಟೆಹ್ರಾನ್ ಮೇಲೆ ʻಅಗ್ನಿ ಮಳೆ’!
ನಿಮ್ಮ ಕಣ್ಣೆದುರೇ ಇಸ್ರೇಲ್‌ನ ಭೀಕರ ಕ್ಷಿಪಣಿಗಳು ಇರಾನ್ ರಾಜಧಾನಿಯನ್ನು ಸೀಳಿಕೊಂಡು ಬರುತ್ತಿವೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಮತ್ತು ಅಧ್ಯಕ್ಷರ ಭವನಗಳನ್ನೇ ಗುರಿಯಾಗಿಸಿ ನಡೆಸಲಾದ ಈ ‘ಸರ್ಜಿಕಲ್ ಸ್ಟ್ರೈಕ್’ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಶನಿವಾರದ ಆ ಮುಂಜಾನೆ ಮುಗಿಯುವ ಹೊತ್ತಿಗೆ ಇರಾನ್ ಜನತೆ ತತ್ತರಿಸಿದ್ದಾರೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರ ಒಂದು ‘ಆದೇಶ’ ಇಡೀ ಮಧ್ಯಪ್ರಾಚ್ಯವನ್ನೇ ಯುದ್ಧದ ಹಳ್ಳಕ್ಕೆ ತಳ್ಳಿದೆ.

ʻಆಪರೇಷನ್ ಶೀಲ್ಡ್ ಆಫ್ ಜುದಾ’: ಅಮೆರಿಕ-ಇಸ್ರೇಲ್ ಚಕ್ರವ್ಯೂಹ
ಇದು ಕೇವಲ ಇಸ್ರೇಲ್‌ನ ಒಂಟಿ ದಾಳಿಯಲ್ಲ. ಅಮೆರಿಕದ ಆಶೀರ್ವಾದದೊಂದಿಗೆ ʻಆಪರೇಷನ್ ಶೀಲ್ಡ್ ಆಫ್ ಜುದಾ’ ಹೆಸರಿನಲ್ಲಿ ಹೂಡಲಾದ ಮಹಾನ್ ಸಂಚು! ಇರಾನ್‌ನ ಪ್ರಮುಖ ಮಿಲಿಟರಿ ನೆಲೆಗಳು ಈಗ ಧಗಧಗನೆ ಉರಿಯುತ್ತಿವೆ. ಅಲಿ ಖಮೇನಿ ಅವರನ್ನು ರಹಸ್ಯ ಸುರಂಗಕ್ಕೆ ಸ್ಥಳಾಂತರಿಸಲಾಗಿದೆಯಾದರೂ, ಇರಾನ್‌ನ ಅಹಂಕಾರಕ್ಕೆ ಇಸ್ರೇಲ್ ಸರಿಯಾದ ಪೆಟ್ಟು ನೀಡಿದೆ.

ಇಸ್ರೇಲ್ ದೇಶಾದ್ಯಂತ ‘ಸ್ಟೇಟ್ ಆಫ್ ಎಮರ್ಜೆನ್ಸಿ’ ಘೋಷಿಸಲಾಗಿದೆ. ನಿಮ್ಮ ಕಣ್ಣಮುಂದೆ ಇಸ್ರೇಲ್‌ನ ‘ಐರನ್ ಡೋಮ್’ ವಾಯು ರಕ್ಷಣಾ ವ್ಯವಸ್ಥೆ ಆಕಾಶದತ್ತ ಮುಖ ಮಾಡಿ ನಿಂತಿದೆ. ಇರಾನ್‌ನಿಂದ ಯಾವುದೇ ಕ್ಷಣದಲ್ಲಿ ‘ಸಾವಿನ ಹಕ್ಕಿಗಳು’ (ಡ್ರೋನ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳು) ಬರಬಹುದು ಎಂಬ ಆತಂಕದಲ್ಲಿ ಇಡೀ ದೇಶ ಬಂಕರ್‌ಗಳ ಒಳಗೆ ಅಡಗಿದೆ. ಇರಾನ್ ಮತ್ತು ಇರಾಕ್ ತಮ್ಮ ವಾಯುಪ್ರದೇಶವನ್ನು ಸಂಪೂರ್ಣ ಬಂದ್ ಮಾಡಿವೆ. ವಿಮಾನಗಳು ಹಾರಾಟ ನಿಲ್ಲಿಸಿವೆ, ಕೇವಲ ಯುದ್ಧವಿಮಾನಗಳ ಸದ್ದು ಮಾತ್ರ ಕೇಳಿಸುತ್ತಿದೆ. ಈ ಯುದ್ಧದಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುವ ಲಕ್ಷಣಗಳಿವೆ.

ಇಸ್ರೇಲ್ ತನ್ನ ಐರನ್ ಡೋಮ್ ಸನ್ನದ್ಧಗೊಳಿಸಿದೆ. ಇರಾನ್‌ನ ಪ್ರತೀಕಾರದ ದಾಳಿ ಎಷ್ಟು ಭೀಕರವಾಗಿರಬಹುದು? ಇದು 3ನೇ ಮಹಾಯುದ್ಧಕ್ಕೆ ನಾಂದಿಯೇ? ಎಂದು ಸದ್ಯಕ್ಕೆ ವಿಶ್ವವೇ ಉಸಿರು ಬಿಗಿಹಿಡಿದು ನೋಡುತ್ತಿದೆ. ಇಸ್ರೇಲ್‌ನ ಈ ಮುನ್ನೆಚ್ಚರಿಕಾ ದಾಳಿ ಇರಾನ್ ಅನ್ನು ಮಂಡಿಯೂರಿಸುತ್ತದೆಯೇ ಅಥವಾ ಮತ್ತಷ್ಟು ಕೆರಳಿಸುತ್ತದೆಯೇ? ಉತ್ತರ ಇನ್ನು ಕೆಲವೇ ಗಂಟೆಗಳಲ್ಲಿ ನಿಮ್ಮ ಮುಂದೆ ಬರಲಿದೆ!

error: Content is protected !!