ಮುಂಬಯಿ: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಸೇರಿ ಎಲ್ಲಾ ಆರೋಪಿಗಳನ್ನು ಮಹಾರಾಷ್ಟ್ರದ NIA ಕೋರ್ಟ್ ಖುಲಾಸೆಗೊಳಿಸಿದೆ. ಮಾಲೆಗಾಂವ್ ಸ್ಪೋಟದಲ್ಲಿ ಪ್ರಜ್ಞಾ ಸಿಂಗ್ ಅವರ ಬಂಧನವಾಗುತ್ತಿದ್ದಂತೆಯೇ, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಸರ್ಕಾರ ಇವರಿಗೆ ʻಹಿಂದೂ ಟೆರರಿಸ್ಟ್’ ಎನ್ನುವ ಹಣೆಪಟ್ಟಿಯನ್ನು ಕಟ್ಟಿತು.
2008ರಲ್ಲಿ ನಡೆದ ಪ್ರಕರಣಕ್ಕೆ ಹದಿನೇಳು ವರ್ಷಗಳ ನಂತರ ತೀರ್ಪು ಪ್ರಕಟವಾಗಿದೆ. ಸೆಪ್ಟಂಬರ್ 29, 2008ರಲ್ಲಿ ಮಾಲೆಗಾಂವ್ ಭೀಕು ಚೌಕ್ ನಲ್ಲಿ ನಡೆದ ಸ್ಫೋಟದಲ್ಲಿ ಆರು ಜನರು ಮೃತ ಪಟ್ಟು, ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಮೋಟಾರ್ ಸೈಕಲಿಗೆ ಕಟ್ಟಿದ್ದ ಬಾಂಬ್ ಸ್ಫೋಟಗೊಂಡು ಈ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್, ಲೆ.ಕ. ಪುರೋಹಿತ್ ಸೇರಿದಂತೆ ಏಳು ಜನರನ್ನು ಆರೋಪಿಗಳೆಂದು ಪರಿಗಣಿಸಲಾಗಿತ್ತು. ಮುಸ್ಲಿಮರ ಪವಿತ್ರ ರಮಜಾನ್ ಮಾಸದ ವೇಳೆ ಈ ಘಟನೆ ನಡೆದಿತ್ತು.
ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರದ ಎಟಿಎಸ್ ( Anti-Terrorism Squad ) ಪ್ರಾರಂಭಿಸಿದ್ದರೂ, ಅದನ್ನು 2011ರಲ್ಲಿ ಎನ್ಐಎಗೆ ( National Investigation Agency) ವರ್ಗಾಯಿಸಲಾಯಿತು. ಹಿಂದೂ ಬಲಪಂಥೀಯ ಸಂಘಟನೆಗಳ ಜೊತೆ ಗುರುತಿಸಿಕೊಂಡವರು ಈ ದಾಳಿಯನ್ನು ನಡೆಸಿದ್ದಾರೆ ಎಂದು ಆರೋಪಿಸಲಾಯಿತು ಮತ್ತು ಪ್ರಜ್ಞಾ ಸಿಂಗ್ ಸೇರಿದಂತೆ ಎಲ್ಲರನ್ನು ಬಂಧಿಸಲಾಯಿತು. ಏಪ್ರಿಲ್ 2017ರಲ್ಲಿ ಆರೋಗ್ಯದ ದೃಷ್ಟಿಯಿಂದ ಇವರಿಗೆ ಜಾಮೀನು ನೀಡಲಾಗಿತ್ತು.
ತೀರ್ಪು ಪ್ರಕಟವಾಗುವ ಒಂದು ದಿನದ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿಯನ್ನು ನಡೆಸಿದ್ದರು. ಯಾವ ಹಿಂದೂ ಕೂಡಾ ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎಂದು ಹೇಳಲು ನನಗೆ ಹೆಮ್ಮೆಯಿದೆ ಎಂದು ಹೇಳಿದ್ದರು.