ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿಯಲ್ಲಿ ನಾಳೆ ಬ್ರಹ್ಮಕಲಶೋತ್ಸವ ಸಂಭ್ರಮ

ಸುರತ್ಕಲ್:‌ ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘದ ಸಂಚಾಲಕತ್ವದಲ್ಲಿರುವ ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದಲ್ಲಿ ಶ್ರೀ ಕ್ಷೇತ್ರಧರ್ಮರಸು ಉಳ್ಳಾಯ, ಇಷ್ಟದೇವತಾ, ಮೂಲ ಮೈಸಂದಾಯ, ಓಡ್ಯಂತಾಯ, ಜುಮಾದಿ-ಬಂಟ, ಜಾರಂದಾಯ-ಬಂಟ, ಕೊಡಮಣಿತ್ತಾಯ ದೈವಗಳ ಹಾಗೂ ಕಾಂತಾಬಾರೆ ಬೂದಾಬಾರೆ ಮತ್ತು ಮಾಯಂದಾಲ್ ಶಕ್ತಿಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಾಳೆ, ದಿನಾಂಕ 08-02-2026ರ ಆದಿತ್ಯವಾರ ಹಳೆಯಂಗಡಿ ಶ್ರೀ ವೇದಮೂರ್ತಿ ಎಚ್. ರಂಗನಾಥ ಭಟ್ ಅವರ ನೇತೃತ್ವದಲ್ಲಿ ಅತ್ಯಂತ ಸಂಭ್ರಮದಿಂದ ನಡೆಯಲಿದೆ.

ಅಂದು ಬೆಳಿಗ್ಗೆ 6 ಗಂಟೆಯಿಂದ ಸ್ವಸ್ತಿ ಪುಣ್ಯಾಹ, ಗಣಹೋಮ, ಪ್ರತಿಷ್ಠಾಹೋಮ ಹಾಗೂ ಶಕ್ತಿ ಪಂಚಾಕ್ಷರಿ ಹೋಮಗಳು ನಡೆಯಲಿದ್ದು, ಪೂರ್ವಾಹ್ನ 8.30ರ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು ಪ್ರಸನ್ನ ಪೂಜೆ ನೆರವೇರಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 4ಕ್ಕೆ ವಿಠಲ ನಾಯಕ್ ಕಲ್ಲಡ್ಕ ಬಳಗದಿಂದ ಹಾಸ್ಯ ಸಂಭ್ರಮ ಹಾಗೂ ರಾತ್ರಿ 8.30ಕ್ಕೆ ಸಾಯಿಶಕ್ತಿ ಕಲಾಬಳಗ ಉರ್ವ ಇವರಿಂದ ‘ಸತ್ಯೋದ ಸಾವಿಗ್ ಧರ್ಮೊದ ಬೊಲ್ಪು’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ದಿನಾಂಕ 09-02-2026ರ ಸೋಮವಾರದಂದು ಬೆಳಿಗ್ಗೆ 5ರಿಂದ ಉಳ್ಳಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ಹಾಗೂ ಸಂಜೆ ಓಡ್ಯಂತಾಯ ಮತ್ತು ರಾತ್ರಿ ಜಾರಂದಾಯ ಬಂಟ ಸೇರಿದಂತೆ ವಿವಿಧ ದೈವಗಳ ನೇಮ ನಡೆಯಲಿದೆ. ಅಂದು ಮಧ್ಯಾಹ್ನ ಪದ್ಮನಾಭ ಸಸಿಹಿತ್ಲು ನೇತೃತ್ವದ ಕಲಾ ಸೌರಭ ಮುಂಬಯಿ ತಂಡದಿಂದ ಸಂಗೀತ ಕಾರ್ಯಕ್ರಮವಿರಲಿದೆ.

ಫೆಬ್ರವರಿ 10ರ ಮಂಗಳವಾರ ಬೆಳಿಗ್ಗೆ ಧ್ವಜಾವರೋಹಣದೊಂದಿಗೆ ಈ ಪುಣ್ಯ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದ್ದು, ಅನುವಂಶಿಕ ಮೊಕ್ತೇಸರರಾದ ಶ್ರೀ ಕಾಂತುಲಕಣ ಗಡಿಪ್ರದಾನರು ಯಾನೆ ಪಠೇಲರ ಮನೆತನದವರು, ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಮಹಿಳಾ ಸಮಿತಿ ಹಾಗೂ ಸಸಿಹಿತ್ಲುವಿನ ಹದಿನಾರು ಗುರಿಕಾರ ಮನೆತನದವರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ

error: Content is protected !!