ಮಂಗಳೂರು: ಅಪ್ರಾಪ್ತ 16 ವರ್ಷದ ಬಾಲಕಿಯಗೆ ಬೆದರಿಸಿ, ಅತ್ಯಾಚಾರ ಎಸಗಿ ವಿಡಿಯೋ ಮಾಡಿದ್ದ ತಪ್ಪಿತಸ್ಥ ಬಂಟ್ವಾಳದ ಸಜಿಪನಡು ಗ್ರಾಮದ ಬಸ್ತಿಗುಡ್ಡೆ ನಿವಾಸಿ ಮನ್ಸೂರ್ @ ಮೊಹಮ್ಮದ್ ಮನ್ಸೂರ್ @ ಜಾಬೀರ್ ಎಂಬಾತನಿಗೆ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-2 (ಪೋಕ್ಸೋ )20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಮತ್ತು ರೂ. 50,000 ದಂಡ ವಿಧಿಸಿದೆ.
ಅಲ್ಲದೆ ಬೆದರಿಕೆ ನೀಡಿರುವುದಕ್ಕಾಗಿ 5,000 ದಂಡ ಮತ್ತು 1 ವರ್ಷ ಶಿಕ್ಷೆಯನ್ನು ವಿಧಿಸಿ ಮಾನ್ಯ ನ್ಯಾಯಾಧೀಶರಾದ ಮಾನು ಕೆ.ಎಸ್. ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕರು ಬದ್ರಿನಾಥ ಮತ್ತು ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಕರಣವು ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅಪ್ರಾಪ್ತ 16 ವರ್ಷದ ಬಾಲಕಿಗೆ ಮನ್ಸೂರು 30-05-2023 ರಂದು ಅತ್ಯಾಚಾರ ಮಾಡಿ ಬೆದರಿಸಿ ವಿಡಿಯೋ ಮಾಡಿದ್ದ. ಆ ಬಗ್ಗೆ ನೊಂದ ಬಾಲಕಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣಾ ಅ.ಕ್ರ 128/2023 ಕಲಂ: 363, 376(2)(ಎನ್), 376(3), 506 ಐಪಿಸಿ & ಕಲಂ: 6 ಪೋಕ್ಸೋ ಕಾಯಿದೆ ಪ್ರಕಾರ 23-12-2023 ರಂದು ಪ್ರಕರಣ ದಾಖಲಾಗಿತ್ತು.
ಆದರೆ ಆರೋಪಿ ಸುಮಾರು 8 ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದು, ದಿನಾಂಕ 02-07-2024 ರಂದು ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡಿದ್ದ ಮಹಿಳಾ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಗುರುರಾಜ್ ಭಾಗಶಃ ತನಿಖೆ ಪೂರೈಸಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ರಾಜೆಂದ್ರ ಬಿ. ಕೈಗೊಂಡಿದ್ದರು. ಪ್ರಕರಣದಲ್ಲಿ ತನಿಖಾಧಿಕಾರಿಗಳು ಪೂರಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನಿಗದಿತ ಸಮಯದ ಒಳಗಾಗಿ ತನಿಖೆಯನ್ನು ಪೂರೈಸಿ ಆರೋಪಿತ ಮನ್ಸೂರ್ ವಿರುದ್ಧ ದೋಷರೋಪಣಾ ಪತ್ರವನ್ನು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಕೋರ್ಟ್ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.