ಬಲೂಚಿಸ್ತಾನ್: ಶಸ್ತ್ರ ಸಜ್ಜಿತ ವ್ಯಕ್ತಿಗಳು ಬಸ್ ಪ್ರಯಾಣಿಕರನ್ನು ಅಪಹರಿಸಿ, 9 ಮಂದಿಯ ಹತ್ಯೆ ಮಾಡಿರುವ ಭಯಾನಕ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಶುಕ್ರವಾರ (ಜು.11) ತಿಳಿಸಿದ್ದಾರೆ.
ಗುರುವಾರ ಸಂಜೆ ದುಷ್ಕರ್ಮಿಗಳು ಬಸ್ಸಿನಲ್ಲಿದ್ದ ಪಂಜಾಬ್ನ 9 ಪ್ರಯಾಣಿಕರಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಪ್ರಾಂತ್ಯದ ಝೋಬ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ವರದಿಯಾಗಿದೆ.ಗುಂಡೇಟಿನಿಂದ ಗಾಯಗೊಂಡಿದ್ದ ಅವರ ಮೃತದೇಹಗಳು ರಾತ್ರಿಯಿಡೀ ಪರ್ವತಗಳಲ್ಲಿ ಪತ್ತೆಯಾಗಿವೆ ಎಂದುಎಂದು ಸಹಾಯಕ ಆಯುಕ್ತ ಝೋಬ್ ನವೀದ್ ಆಲಂ ತಿಳಿಸಿದ್ದಾರೆ.
ಶಸ್ತ್ರಸಜ್ಜಿತ ದಂಗೆಕೋರರು ಪ್ರಯಾಣಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸಿದರು ಮತ್ತು ಅವರಲ್ಲಿ ಒಂಬತ್ತು ಜನರನ್ನು ಕ್ವೆಟ್ಟಾದಿಂದ ಲಾಹೋರ್‌ಗೆ ಹೋಗುತ್ತಿದ್ದ ಬಸ್‌ನಿಂದ ಇಳಿಸಿ, ಗುಂಡಿಕ್ಕಿ ಕೊಂದಿದ್ದಾರೆ. ಒಂಬತ್ತು ಮಂದಿಯೂ ಪಂಜಾಬ್ ಪ್ರಾಂತ್ಯದ ವಿವಿಧ ಭಾಗಗಳಿಗೆ ಸೇರಿದವರಾಗಿದ್ದು, ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಕ್ರಿಯೆಗಾಗಿ ನಾವು ಒಂಬತ್ತು ಶವಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ ಎಂದು ಅವರು ಹೇಳಿದರು.
ಪ್ರತ್ಯೇಕತಾವಾದಿ ಬಲೂಚ್ ಉಗ್ರಗಾಮಿಗಳು ಈ ಹಿಂದೆಯೂ ಇಂತಹ ಘಟನೆಗಳಲ್ಲಿ ಭಾಗಿಯಾಗಿದ್ದು, ಪೂರ್ವ ಪಂಜಾಬ್ ಪ್ರಾಂತ್ಯದಿಂದ ಬಂದವರೆಂದು ಗುರುತಿಸಿ ಪ್ರಯಾಣಿಕರನ್ನು ಕೊಲ್ಲುತ್ತಿದ್ದರು.