ತುಮಕೂರು: ಟ್ಯಾಂಕರ್ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಬೈಪಾಸ್ ಬಳಿ ಭಾನುವಾರ ಸಂಭವಿಸಿದೆ.
ಮಗನನ್ನು ಹಾಸ್ಟೆಲ್‌ಗೆ ಬಿಟ್ಟು ಬರಲು ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಮಾಗಡಿ ತಾಲೂಕಿನ ಮತ್ತಿಕೆರೆ ಗ್ರಾಮದ ಸಿಬೇಗೌಡ (48), ಶೋಭಾ (42), ದುಂಬಿಶ್ರೀ(16), ಭಾನು ಕಿರಣ್ ಗೌಡ (14) ಮೃತರು.
ಸೀಬೇಗೌಡ ಬೆಂಗಳೂರು ದಕ್ಷಿಣ ಜಿಲ್ಲೆ(ರಾಮನಗರ)ಯ ಮಾಗಡಿ ತಾಲೂಕಿನ ಮತ್ತಿಕೆರೆ ಗ್ರಾಮದವರು. ಕುಟುಂಬ ಮಾಗಡಿ ಪಟ್ಟಣದಲ್ಲಿ ವಾಸವಿತ್ತು. ಭಾನುವಾರ ರಾತ್ರಿ ಕುಣಿಗಲ್‌ನ ಖಾಸಗಿ ವಸತಿಶಾಲೆಯೊಂದರಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಭಾನು ಕಿರಣ್ ಗೌಡನನ್ನು ಬಿಟ್ಟು ಬರಲು ಕುಟುಂಬ ಕುಣಿಗಲ್ ಗೆ ತೆರಳಿತ್ತು. ಯೂಟರ್ನ್ ತೆಗೆದುಕೊಳ್ಳುವಾಗ ಕಾರಿಗೆ ಕ್ಯಾಂಟರ್ ಢಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೀಬೇಗೌಡ ಮತ್ತು ಶೋಭಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದ. ಹಿರಿಯ ಮಗಳಿಗೆ ಮದುವೆಯಾಗಿದೆ. ಮಗನನ್ನು ಹಾಸ್ಟೆಲ್ ಗೆ ಬಿಡಲು ಪತ್ನಿ ಮತ್ತು ಎರಡನೇ ಮಗಳ ಜತೆ ಸೀಬೇಗೌಡ ಕಾರಿನಲ್ಲಿ ತೆರಳಿದ್ದಾಗ ಅಪಘಾತ ಸಂಭವಿಸಿ , ನಾಲ್ವರೂ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ದೇಹಗಳನ್ನು ಕುಣಿಗಲ್ ತಾಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.
ಸೀಬೇಗೌಡ ಅವರು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರ ಅತ್ಯಾಪ್ತರಾಗಿದ್ದರು.
ಎರಿಟಿಗಾ ಕಾರು ಸಂಪೂರ್ಣ ಜಖಂ