ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿದ ರಮಾನಾಥ ರೈ!

ಮಂಗಳೂರು: ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಹೆಸರು ಹೇಳಿ ಅದೊಂದು ಕರಾಳ ದಿನ ಎಂದು ಬಿಂಬಿಸುವಂತಹಾ ಕೆಲಸ ನಡೆಯುತ್ತಿದೆ. ಆದರೆ ಈ ಸಂದರ್ಭದಲ್ಲಿ ಬಡವರಿಗಾದ ಲಾಭದ ಬಗ್ಗೆಯೂ ಮಾತಾಡಬೇಕಾಗುತ್ತದೆ. ತುರ್ತು ಪರಿಸ್ಥಿತಿಯ ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮಂಗಳೂರಿನಲ್ಲಿ ಭಾರೀ ಮತದಿಂದ ಗೆದ್ದಿತ್ತು. ಇಂದಿರಾ ತೆಗೆದುಕೊಂಡ ತೀರ್ಮಾನವನ್ನು ಉತ್ತಮ ಎಂದು ಅಂದು ಮಂಗಳೂರಿನ ಜನ ಒಪ್ಪಿದ್ದರು. ಇದನ್ನು ನಾವು ಐವತ್ತು ವರ್ಷ ಆದ್ರೂ ನೆನಪಿಟ್ಟುಕೊಳ್ಳಬೇಕು. ಅಂದು ಬಡವರು, ಪರಿಶಿಷ್ಠ ಜಾತಿ ಪಂಗಡವರು ಜೈಲಿಗೆ ಹೋಗಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಇಂದಿರಾ ಗಾಂಧಿ ದೇಶಕ್ಕೆ ಹೇರಿದ ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಂಗಳೂರಿನ ಕಾಂಗ್ರೆಸ್‌ ಭವನದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ ತುರ್ತು ಪರಿಸ್ಥಿತಿಯ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಇಲ್ಲ. ಅವರು ಪ್ರತಿಪಕ್ಷದವರನ್ನು ಗುರಿಯಾಗಿಸಿ ಇ.ಡಿ. ಮೂಲಕ ಜೈಲಿಗೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಇದೀಗ ಸಂವಿಧಾನದ ಅಪಾಯ ಸ್ಥಿತಿಯಲ್ಲಿದೆ. ಮಣಿಪುರದಲ್ಲಿ ಈಗ ಗಲಭೆ ನಡೆಯುತ್ತಿದೆ. ಭೀಮ ಕೊರೆಗಾಂವ್‌, ಗೋದ್ರಾದಂತಹಾ ಘಟನೆಗಳು ನಮ್ಮ ಕಣ್ಣ ಮುಂದೆ ಇದೆ. ಆದರೆ ತುರ್ತು ಪರಿಸ್ಥಿತಿಯಿಂದ ದೇಶಕ್ಕೆ ಅನೇಕ ಲಾಭಗಳಾಗಿವೆ. ದುರ್ಬಲ ವರ್ಗದವರಿಗೆ ಬಲಿಷ್ಠವಾದ ಕೆಲಸ ಮಾಡಿದ್ದಾರೆ, ಬ್ಯಾಂಕ್‌ ರಾಷ್ಟ್ರೀಕರಣಗೊಂಡಿದ್ದು ಕೂಡಾ ಅದೇ ಸಂದರ್ಭದಲ್ಲಿ, ಭೂ ಮಸೂದೆ ಅತ್ಯಂತ ಪರಿಣಾಮಕಾರಿ ರೀತಿ ಜಾರಿಯಾಯಿತು. ಬ್ಯಾಂಕ್‌ ರಾಷ್ಟ್ರೀಕರಣ, ಭೂ ಮಸೂದೆ ಪರಿಣಾಮಕಾರಿಯಾಗಿ ಜಾರಿಗೆ ಬರಲು ಅನುಕೂಲವಾಯಿತು ಎಂದು ರಮಾನಾಥ ರೈ ಹೇಳಿದರು.

ಈ ಜಿಲ್ಲೆಯ ಸಾಮಾಜಿಕ ಬದಲಾವಣೆ ದೊಡ್ಡ ಪ್ರಮಾಣದಲ್ಲಿ ಇಂದಿರಾ ಗಾಂಧಿ ಕಾರ್ಯಕ್ರಮದ ಮೂಲಕ ಆಯಿತು. ಅವರ ದೃಢವಾದ ನಿರ್ಧಾರದ ಕಾರ್ಯಕ್ರಮಗಳು, ಬಡವರಿಗೆ ನಿವೇಶನ, ಭೂ ಮಸೂದೆ ಮೂಲಕ ಭೂಮಿ ಕೊಟ್ಟಿರುವುದು, ಅವರ 20 ಅಂಶದ ಪ್ರಗತಿಪರ ಆರ್ಥಿಕ ಕಾರ್ಯಕ್ರಮಗಳು, ವೃದ್ಧಾಪ್ಯವೇತನ ಮೂಲಕ ಬಡವರ ಸಬಲೀಕರಣ ಮಾಡುವ ಕೆಲಸ ಮಾಡಿದ್ದಾರೆಂಬುದನ್ನೂ ನಾವು ಜನರ ಗಮನಕ್ಕೆ ಕೊಡಬೇಕು. ತುರ್ತು ಪರಿಸ್ಥಿತಿಯನ್ನು ಇಟ್ಟುಕೊಂಡು ಮಾತಾಡುವವರು ಇಂದಿರಾ ದೇಶದ ಐಕ್ಯತೆಗಾಗಿ ಪ್ರಾಣ ಕಳೆದುಕೊಂಡಿರುವುದನ್ನೂ ನೆನಪಲ್ಲಿಟ್ಟುಕೊಳ್ಳಬೇಕು. ತುರ್ತು ಪರಿಸ್ಥಿತಿಯಿಂದ ವಿರೋಧ ಪಕ್ಷದವರಿಗೆ ತೊಂದರೆಯಾಗಿಬಹುದು, ಆದರೆ ಬಡವರಿಗೆ ಅನುಕೂಲವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ನವೀನ್ ಡಿʼಸೋಜ, ಅಬ್ಬಾಸ್ ಅಲಿ, ಜಯಶೀಲ ಅಡ್ಯಂತಾಯ, ಕುಮಾರಿ ಅಪ್ಪಿ, ಪೃಥ್ವಿರಾಜ್, ಜೆ. ಸಲೀಮ್, ಇಬ್ರಾಹಿಂ ನವಾಜ್, ಸುಹಾನ್ ಆಳ್ವ, ದಿನೇಶ್ ಕುಮಾರ್, ಅಶೋಕ್ ಡಿಕೆ ಹಾಗೂ ನಿತ್ಯಾನಂದ ಶೆಟ್ಟಿ ಇದ್ದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!