ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ ಪ್ರಕರಣಗಳ ವಿಚಾರವಾಗಿ ಚರ್ಚಿಸಲು ಬೆಂಗಳೂರಿನ ನ್ಯಾಯವಾದಿಗಳ ನಿಯೋಗ ಮಂಗಳೂರು ಎಸ್‌ಪಿ ಕಚೇರಿಗೆ ಅಗಮಿಸಿತು. ಆದರೆ ಎಸ್‌ಪಿ ಕಚೇರಿಯಲ್ಲಿರದ ಕಾರಣ ವಾಪಸ್ ತೆರಳಿದೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ, ವ್ಯಕ್ತಿಯೊಬ್ಬ ಮಾಹಿತಿ ಹೊಂದಿದ್ದು, ಆ ವ್ಯಕ್ತಿಗೆ ಅಗತ್ಯವಾದ ಕಾನೂನು ಸುರಕ್ಷತೆಯನ್ನು ಕಲ್ಪಿಸಿ, ಆ ಬಳಿಕ ಆತನನ್ನು ಹಾಜರುಪಡಿಸುವುದಾಗಿ ಬೆಂಗಳೂರಿನ ಇಬ್ಬರು ನ್ಯಾಯವಾದಿಗಳು ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ವ್ಯಕ್ತಿ ಹಾಜರಾಗಿ ಮಾಹಿತಿ ನೀಡಿದಲ್ಲಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಡಾ. ಅರುಣ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಚರ್ಚಿಸಲು ಎಸ್ಪಿ ಭೇಟಿಗಾಗಿ ಮಂಗಳೂರಿಗೆ ಬೆಂಗಳೂರಿನ ವಕೀಲರ ನಿಯೋಗ ಆಗಮಿಸಿತು ಎನ್ನಲಾಗಿದೆ.
ಎಸ್‌ಪಿ ಕಚೇರಿಯ ಮುಂದೆ ಹೊತ್ತು ಕಾದು ಕುಳಿತ ವಕೀಲರು, ಎಸ್‌ಪಿ ಕಚೇರಿಯಲ್ಲಿಲ್ಲ ಎಂಬ ಮಾಹಿತಿ ತಿಳಿದು ವಾಪಸ್ ತೆರಳಿತು.
ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ ಸ್ಪಷ್ಟವಾಗಿ ಮಾಹಿತಿ ನೀಡದ ವಕೀಲರು, ಏನಿದ್ದರೂ ಎಸ್‌ಪಿ ಮುಂದೆಯೇ ಹೇಳುತ್ತೇವೆ. ನೋ ಕಮೆಂಟ್ಸ್ ಎಂದಷ್ಟೇ ಹೇಳಿ ತೆರಳಿದ್ದಾರೆ.
ಎಸ್‌ಪಿ ಡಾ. ಅರುಣ್ ಅವರು ತುರ್ತು ಕೆಲಸ ನಿಮಿತ್ತ ಬೆಂಗಳೂರಿಗೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ವಕೀಲರ ತಂಡ ನಾಳೆ ಮತ್ತೆ ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ದೇಶಪಾಂಡೆ ನೇತೃತ್ವದಲ್ಲಿ ನ್ಯಾಯವಾದಿಗಳ ನಿಯೋಗ ಮಂಗಳೂರಿಗೆ ಹಾಜರಾಗಿತ್ತು.