ಮೂಡಬಿದ್ರೆ: ಅಪಘಾತ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ ಬಸ್ ಮಾಲಕರಿಂದ ಕಾನೂನು ಬಾಹಿರವಾಗಿ ಸ್ಕೂಟರ್ ಸವಾರನಿಗೆ ಹಣ ತೆಗೆಸಿಕೊಟ್ಟ ಆರೋಪದ ಮೇಲೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಸಮಿತ್‌ರಾಜ್ ಧರೆಗುಡ್ಡೆ ಎಂಬವರನ್ನು ಮೂಡಬಿದ್ರೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿಜಿ ನೇತೃತ್ವದ ಪೊಲೀಸ್ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
2024ರ ನವೆಂಬರ್ 11ರಂದು ತೋಡಾರಿನ ಬಳಿ ಖಾಸಗಿ ಎಕ್ಸ್ ಪ್ರೆಸ್ ಬಸ್ ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ಸಂದರ್ಭ ಸ್ಕೂಟರ್‌ಗೆ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದರು. ಈ ವೇಳೆ ಉದ್ರಿಕ್ತ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಮುಖಂಡ ಸಮಿತ್ ರಾಜ್ ಬಸ್ ಮಾಲಕ ರಫೀಕ್ ರಿಂದ ಗಾಯಾಳುಗಳಿಗೆ 5 ಲಕ್ಷ ರೂ. ಹಣ ತೆಗೆಸಿಕೊಟ್ಟಿದ್ದರು ಎನ್ನಲಾಗಿದೆ.
‘ಸಮಿತ್‌ರಾಜ್ ಬಲವಂತವಾಗಿ ಗಾಯಾಳುಗಳಿಗೆ 5 ಲಕ್ಷ ರೂ. ಹಣ ಕೊಡಿಸಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು‘ ಎಂದು ಬಸ್ ಮಾಲಕ ರಫೀಕ್ ಮೂಡಬಿದ್ರೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿಜಿ ಅವರು ಸಮಿತ್‌ರಾಜ್ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.