ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವಿದ್ಯಾರ್ಥಿ ಗಳಿಂದ ಕ್ಲೀನ್ ಸೌಪರ್ಣಿಕ ಗ್ರೀನ್ ಕೊಲ್ಲೂರು

ಕೊಲ್ಲೂರು/ಮಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಅಧೀನದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಕಾಲೇಜು ನೇತೃತ್ವದಲ್ಲಿ ಕೊಲ್ಲೂರು ಮೂಕಾಂಬಿಕ ದೇವಳದ ಆವರಣದಲ್ಲಿ ಸ್ವಚ್ಛತಾ ಅಭಿಯಾನದ ಅಂಗವಾಗಿ ‘ಕ್ಲೀನ್ ಸೌಪರ್ಣಿಕ ಗ್ರೀನ್ ಕೊಲ್ಲೂರು’ ಅಭಿಯಾನ ಗುರುವಾರ ನಡೆಯಿತು.

ಕಾರ್ಯಕ್ರಮವನ್ನು ಕೊಲ್ಲೂರು ದೇವಸ್ಥಾನದ ಮುಂಭಾಗ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕ‌ ದೇಗುಲ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮಕ್ಕಳಿಂದ ನಡೆಯುವ ಒಂದು ದಿನದ ಅಭಿಯಾನದಿಂದ ದೇಗುಲದ ಆವರಣ ಅಥವಾ ಸೌಪರ್ಣಿಕ ಸ್ವಚ್ಛವಾಗಿ ಉಳಿಯುವುದಿಲ್ಲ. ಆದರೆ ಮಕ್ಕಳ ಈ ಅಭಿಯಾನದಿಂದಾಗಿ ಜನರಿಗೆ ಜಾಗೃತಿ ಮೂಡುತ್ತದೆ. ಇಂತಹಾ ಜಾಗೃತಿಗೆ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಕ್ಷೇತ್ರದ ಆವರಣವನ್ನು ಸ್ವಚ್ಛವಾಗಿಡುವ ಮೂಲಕ ದೇವರಿಗೆ ಇನ್ನಷ್ಟು ಹತ್ತಿರವಾಗೋಣ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕ‌ ದೇಗಲುದ ಕಾರ್ಯನಿರ್ವಾಹಣಾ ಅಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಪೋಸ್ಟರ್ ಬಿಡುಗಡೆ ಮಾಡಿದರು‌.


ಪ್ರಧಾನ ಅರ್ಚಕ ಸುಬ್ರಮಣ್ಯ ಅಡಿಗ ಮತನಾಡಿ, ತಾಯಿ ಮೂಕಾಂಬಿಕ ಪ್ರಕೃತಿಪ್ರಿಯಳು. ಪ್ರಕೃತಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆಕೆಗೆ ಸಲ್ಲಿಸುವ ನಿಜವಾದ ಪೂಜೆಯಾಗಿದೆ. ನಿಟ್ಟೆ ಮಕ್ಕಳ ಈ ಕಾರ್ಯಕ್ಕೆ ತಾಯಿ ಮೂಕಾಂಬಿಕೆ ಅನುಗ್ರಹ ಸಿಗಲಿ, ಅವರ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದರು.

ದೇಗುಲದ ಟ್ರಸ್ಟಿ ಡಾ. ಅಭಿಲಾಷ್, ಕ್ಷೇತ್ರದ ಅರ್ಚಕ ವಿಷ್ಣುಮೂರ್ತಿ ಉಡುಪ ನಿಟ್ಟೆ ಯುನಿವರ್ಸಿಟಿ ಹಾಗೂ ಅಭಿಯಾನದಲ್ಲಿ ಪಾಲ್ಗೊಂಡ ಮಕ್ಕಳಿಗೆ ಹಾರೈಸಿದರು.

ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಅಧೀನದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಕಾಲೇಜಿನ 120 ವಿದ್ಯಾರ್ಥಿಗಳು ಸೌಪರ್ಣಿಕ ನದಿಯನ್ನು ಸ್ವಚ್ಛಗೊಳಿಸಿ, ದೇವಸ್ಥಾನದ ಆವರಣದ ಕಸಕಡ್ಡಿಗಳನ್ನು ಹೆಕ್ಕಿ ಪರಿಸರವನ್ನು ಸ್ವಚ್ಛಗೊಳಿಸಿದರು. ಸೌಪರ್ಣಿಕ ಸ್ನಾನಘಟ್ಟದ ಬಳಿ ಭಕ್ತರು ಬಿಟ್ಟಿದ್ದ ಬಟ್ಟೆಗಳನ್ನು ತೆರವು ಮಾಡಿ, ಸ್ನಾನ ಘಟ್ಟದ ಆವರಣಗೋಡೆಗಳನ್ನು ಸ್ವಚ್ಚಗೊಳಿಸಿ ಅದಕ್ಕೆ ಸುಣ್ಣ ಬಣ್ಣ ಬಳಿದು ಸುಂದರಗೊಳಿಸಿದರು. ತಾವು ಕಸ ಹೆಕ್ಕಿದ ಸ್ಥಳದಲ್ಲಿ ಪರಿಸರ ಸ್ವಚ್ಛವಾಗಿಡುವ ಸಂಕಲ್ಪದ ಪೋಸ್ಟರ್ ಅಂಟಿಸಿದರು. ದೇವಸ್ಥಾನದ ಆವರಣದಲ್ಲಿ ದೈವಿಕ ಹಿನ್ನೆಲೆಯುಳ್ಳ ಫಲ, ಪುಷ್ಪದ ಗಿಡಗಳನ್ನು ನೆಟ್ಟರು. ಕೇವಲ ಒಂದು ದಿನದ ಮಕ್ಕಳ ಕಾರ್ಯದಲ್ಲಿ ಲೋಡುಗಟ್ಟಲೆ ಕಸ ಸಂಗ್ರಹವಾಗಿದೆ. ಕೊಲ್ಲೂರಿಗೆ ಬರುವ ಭಕ್ತರು ದೇಗುಲದ ಆವರಣ ಸ್ವಚ್ಛವಾಗಿಡುವಂತೆ ಮಕ್ಕಳು ಮಾಧ್ಯಮದ ಮುಖಾಂತರ ವಿನಂತಿಸಿಕೊಂಡರು.

ಕೊಲ್ಲೂರು ಗ್ರಾ. ಪಂ ಸದಸ್ಯ ಶಿವರಾಮ ಕೃಷ್ಣ ಭಟ್, ಕಾರ್ಯಕ್ರಮ ಸಂಚಾಲಕ ಪ್ರೊ. ರಾಕೇಶ್ ಕೃಷ್ಣ , ಪ್ರಾಧ್ಯಾಪಕ ವೃಂದದ ಪ್ರೊ.ಪುರುಷೋತ್ತಮ್ ಚಿಪ್ಪಲ, ಪ್ರೊ.ಜಯೇಶ್ ಚಂದ್ರನ್ , ಪುಷ್ಪರಾಜ್ ಹಾಗೂ ರಂಗನಾಥ್ ಕಾಲೇಜ್ ಸಿಬ್ಬಂದಿ ಸಾಥ್ ನೀಡಿದರು.

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಡಾ. ಧನೇಶ್ ಕುಮಾರ್ ಕೆ.ಯು ಸ್ವಾಗತಿಸಿ’ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

error: Content is protected !!