ರಂಝಾನ್ ಹೊತ್ತಲ್ಲೇ ಪಾಕ್ ನೀಚ ಕೃತ್ಯ: ಕಾಬೂಲ್‌ ಆಸ್ಪತ್ರೆ ಮೇಲೆ ಬಾಂಬ್ ಮಳೆಗರೆದು 400 ಮಂದಿಯ ಹತ್ಯೆ: ಭಾರತ ಆಕ್ರೋಶ!

ಕಾಬೂಲ್:‌ ಪಾಕಿಸ್ತಾನವು ಮಾನವೀಯತೆಯ ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ನಡೆಸಿರುವ ವೈಮಾನಿಕ ದಾಳಿ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರದ ಮೇಲೆ ಬಾಂಬ್ ಮಳೆ ಸುರಿಸುವ ಮೂಲಕ ಸುಮಾರು 400 ಮುಗ್ಧ ಜೀವಗಳನ್ನು ಬಲಿ ಪಡೆದಿರುವ ಪಾಕಿಸ್ತಾನದ ಈ ನಡೆ, ಭಯೋತ್ಪಾದನೆಯನ್ನು ಪೋಷಿಸುವ ದೇಶವೊಂದು ಎಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶವನ್ನು ಮಿಲಿಟರಿ ಗುರಿಯನ್ನಾಗಿ ಮಾಡಿಕೊಂಡಿರುವುದು ಪಾಕ್ ಸೇನೆಯ ವಿಕೃತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಘಟನೆಯಲ್ಲಿ 250ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ನಡೆದ ಈ ಭೀಕರ ದಾಳಿಯು ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮೇಲೆ ನಡೆದ ನೇರ ಹಲ್ಲೆಯಾಗಿದೆ. ಸುಮಾರು 2,000 ಹಾಸಿಗೆಗಳ ಸಾಮರ್ಥ್ಯದ ʻಓಮಿದ್’ ಆಸ್ಪತ್ರೆಯ ಮೇಲೆ ಏಕಾಏಕಿ ನಡೆದ ಈ ದಾಳಿಯಿಂದಾಗಿ ನೂರಾರು ರೋಗಿಗಳು ನಿದ್ರೆಯಲ್ಲಿದ್ದಾಗಲೇ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಸಿಗುತ್ತಿರುವ ಸುಟ್ಟು ಕರಕಲಾದ ಶವಗಳು ಮತ್ತು ರಕ್ತಸಿಕ್ತ ಅವಶೇಷಗಳು ಪಾಕಿಸ್ತಾನದ ಈ ಕ್ರೌರ್ಯಕ್ಕೆ ಮೌನ ಸಾಕ್ಷಿಯಾಗಿವೆ. ಯುದ್ಧದ ನಿಯಮಗಳ ಪ್ರಕಾರ ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದು ಯುದ್ಧಾಪರಾಧ ಎಂದು ಪರಿಗಣಿಸಲ್ಪಟ್ಟರೂ, ಪಾಕಿಸ್ತಾನ ಮಾತ್ರ ತನ್ನ ನೈಚ್ಯ ಆಟವನ್ನು ಮುಂದುವರಿಸಿದೆ.

ಭಾರತವು ಈ ಘಟನೆಯನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸಿದೆ. ರಂಝಾನ್‌ನಂತಹ ಪವಿತ್ರ ಮಾಸದಲ್ಲಿ, ಜಗತ್ತಿನಾದ್ಯಂತ ಮುಸ್ಲಿಮರು ಶಾಂತಿ ಮತ್ತು ಪ್ರಾರ್ಥನೆಯಲ್ಲಿ ತೊಡಗಿರುವಾಗ ಪಾಕಿಸ್ತಾನ ಇಂತಹ ರಕ್ತಪಾತಕ್ಕೆ ಕೈಹಾಕಿರುವುದು ಅದರ ಧಾರ್ಮಿಕ ಮತ್ತು ನೈತಿಕ ಪತನವನ್ನು ಬಿಂಬಿಸುತ್ತದೆ ಎಂದು ನವದೆಹಲಿ ಗುಡುಗಿದೆ. ಆಸ್ಪತ್ರೆ ಮತ್ತು ರೋಗಿಗಳನ್ನು ಗುರಿಯಾಗಿಸಲು ಯಾವುದೇ ಧರ್ಮ ಅಥವಾ ಕಾನೂನಿನಲ್ಲಿ ಅವಕಾಶವಿಲ್ಲ. ಪಾಕಿಸ್ತಾನವು ತನ್ನ ಆಂತರಿಕ ಆರ್ಥಿಕ ಮತ್ತು ರಾಜಕೀಯ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಹತಾಶೆಯ ಕೃತ್ಯಗಳನ್ನು ಎಸಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಪಾಕಿಸ್ತಾನ ಮಾತ್ರ ಎಂದಿನಂತೆ ತನ್ನ ಜಾಣ ಕುರುಡು ಪ್ರದರ್ಶಿಸುತ್ತಿದೆ. ನಾವು ಆಸ್ಪತ್ರೆಯ ಮೇಲೆ ದಾಳಿ ಮಾಡಿಲ್ಲ, ಕೇವಲ ಉಗ್ರರ ಅಡಗುದಾಣಗಳ ಮೇಲೆ ನಿಖರ ದಾಳಿ ನಡೆಸಿದ್ದೇವೆ ಎಂದು ಪಾಕಿಸ್ತಾನ ಮಾಹಿತಿ ನೀಡಿದೆ. ಆದರೆ, ನೆಲಸಮವಾಗಿರುವ ಆಸ್ಪತ್ರೆಯ ಕಟ್ಟಡ ಮತ್ತು ಸಾವನ್ನಪ್ಪಿದ ನೂರಾರು ರೋಗಿಗಳು ಪಾಕಿಸ್ತಾನದ ಸುಳ್ಳನ್ನು ಜಗತ್ತಿನ ಮುಂದೆ ಬೆತ್ತಲೆ ಮಾಡಿವೆ. ಅಂತಾರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ಈ ಬೇಜವಾಬ್ದಾರಿ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಈ ಹತ್ಯಾಕಾಂಡಕ್ಕೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಕಳೆದ ಕೆಲವು ವಾರಗಳಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ಸಂಘರ್ಷ ತಾರಕಕ್ಕೇರಿದ್ದು, ಇದು ಪ್ರಾದೇಶಿಕ ಶಾಂತಿಗೆ ದೊಡ್ಡ ಭೀತಿಯನ್ನು ಒಡ್ಡಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಬೆಳೆಸಿ ಈಗ ತಾನೇ ಅದರ ಬಲಿಪಶುವಾಗುತ್ತಿದ್ದರೂ, ಬುದ್ಧಿ ಕಲಿಯದೆ ನೆರೆಯ ದೇಶದ ನಾಗರಿಕರ ಮೇಲೆ ದಾಳಿ ಮಾಡುತ್ತಿರುವುದು ವಿಪರ್ಯಾಸ. ಭಾರತವು ಅಫ್ಘಾನಿಸ್ತಾನದ ಜನರ ನೋವಿನಲ್ಲಿ ಭಾಗಿಯಾಗಿದ್ದು, ಅವರ ಸಾರ್ವಭೌಮತ್ವಕ್ಕೆ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ.

error: Content is protected !!