
ನವದೆಹಲಿ: ಮಕ್ಕಳನ್ನು ದತ್ತು ಪಡೆಯುವ ಮಹಿಳೆಯರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು(ಮಾ.17) ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ತೀರ್ಪನ್ನು ನೀಡಿದೆ. ಮಗುವನ್ನು ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆಯನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಜನ್ಮ ನೀಡಿದ ಮಗು ಮತ್ತು ದತ್ತು ಪಡೆದ ಮಗುವಿನ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಸಮರ್ಥಿಸಿರುವ ನ್ಯಾಯಾಲಯ, ದತ್ತುಪಡೆದ ಮಗುವಿನೊಂದಿಗೆ ಕುಟುಂಬವನ್ನು ರೂಪಿಸಿಕೊಳ್ಳುವುದು ಕೂಡ ಕಾನೂನುಬದ್ಧವಾಗಿವೆ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ತಿಳಿಸಿದೆ.

ಸಾಮಾಜಿಕ ಭದ್ರತಾ ಸಂಹಿತೆಯ ಸೆಕ್ಷನ್ 60(4) ರ ಅಡಿಯಲ್ಲಿ ಇರುವ ನಿಯಮವನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದೆ. ಈ ಹಿಂದಿನ ನಿಯಮದ ಪ್ರಕಾರ, ಕೇವಲ ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ದತ್ತು ಪಡೆದ ತಾಯಂದಿರಿಗೆ ಮಾತ್ರ 12 ವಾರಗಳ ಹೆರಿಗೆ ರಜೆಗೆ ಅವಕಾಶವಿತ್ತು. ಆದರೆ, ಈ ವಯಸ್ಸಿನ ಮಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಮಗು ಎಷ್ಟೇ ದೊಡ್ಡದಿದ್ದರೂ ತಾಯಿ ಮತ್ತು ಮಗುವಿನ ನಡುವೆ ಬಾಂಧವ್ಯ ಬೆಳೆಯಲು ಸಮಯದ ಅಗತ್ಯವಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಮಾತೃತ್ವದ ರಕ್ಷಣೆ ಎಂಬುದು ಮೂಲಭೂತ ಮಾನವ ಹಕ್ಕು ಎಂದು ನ್ಯಾಯಾಲಯ ಹೇಳಿದೆ. ಮಗು ಹುಟ್ಟಿ ಮೂರು ತಿಂಗಳು ಕಳೆದರೂ ಸಹ, ಮಗುವನ್ನು ದತ್ತು ಪಡೆದ ದಿನದಿಂದ ತಾಯಿಗೆ ಹೆರಿಗೆ ರಜೆಯ ಸೌಲಭ್ಯವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ದತ್ತು ಪಡೆದ ತಾಯಂದಿರ ಹಕ್ಕನ್ನು ಎತ್ತಿ ಹಿಡಿಯುವ ಮೂಲಕ ನ್ಯಾಯಾಲಯವು ಸಮಾನತೆಯ ತತ್ವವನ್ನು ಎತ್ತಿ ತೋರಿಸಿದೆ. ಈ ತೀರ್ಪು ದತ್ತು ಪಡೆಯಲು ಇಚ್ಛಿಸುವ ಸಾವಿರಾರು ಮಹಿಳೆಯರಿಗೆ ಮತ್ತು ಸುಗಮವಾಗಿ ಕುಟುಂಬ ನಿರ್ವಹಣೆ ಮಾಡಲು ಬಯಸುವವರಿಗೆ ದೊಡ್ಡ ಮಟ್ಟದ ನೆಮ್ಮದಿ ತಂದಿದೆ.
