ಸ್ಲೀಪರ್ ಬಸ್ – ಟ್ರಕ್ ಮುಖಾಮುಖಿ ಡಿಕ್ಕಿ; ಐವರು ಸಾ*ವು, ಎಂಟಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಜೈಪುರ: ಶ್ರೀಗಂಗಾನಗರದಿಂದ ಜೈಪುರಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಮತ್ತು ಎದುರಿನಿಂದ ಬರುತ್ತಿದ್ದ ಟ್ರೈಲರ್ ಟ್ರಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಪ್ರಯಾಣಿಕರು ಸಾವನ್ನಪ್ಪಿದ್ದು, ಎಂಟಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು(ಮಾ.17) ಮುಂಜಾನೆ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಸುಮಾರು 8 ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ರಸ್ತೆಯ ಬದಿಯಲ್ಲಿ ಸಾಸಿವೆ ಚೀಲಗಳನ್ನು ತುಂಬಿದ್ದ ಎರಡು ಟ್ರೋಲಿಗಳನ್ನು ನಿಲ್ಲಿಸಲಾಗಿತ್ತು. ಇವುಗಳನ್ನು ದಾಟಿಕೊಂಡು ಮುಂದೆ ಹೋಗಲು ಬಸ್ ಚಾಲಕ ಯತ್ನಿಸಿದಾಗ, ಎದುರಿನಿಂದ ವೇಗವಾಗಿ ಬಂದ ಟ್ರೈಲರ್ ಟ್ರಕ್ ಗೆ ಬಸ್ ನೇರವಾಗಿ ಡಿಕ್ಕಿ ಹೊಡೆದಿದೆ ಎಂದು ಉಪವಿಭಾಗಾಧಿಕಾರಿ ಸಂಜಯ್ ಅಗರ್ವಾಲ್ ತಿಳಿಸಿದ್ದಾರೆ.

ಗಾಯಾಳುಗಳನ್ನು ರಾವತ್‌ಸರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿರುವವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ರಾವತ್‌ಸರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಈಶ್ವರಾನಂದ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!