ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನೀಡಲಾಗುವ 2026ನೇ ಸಾಲಿನ ಪ್ರತಿಷ್ಠಿತ ರಾಜ್ಯ ಮಟ್ಟದ ‘ವಂದನಾ ಪ್ರಶಸ್ತಿ’ಗೆ ಹಸಿರು ಕ್ರಾಂತಿಕಾರ ಹಾಗೂ ಪರಿಸರ ಪ್ರೇಮಿ ಡಾ. ಆರ್. ಕೆ. ನಾಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ್ 21ರ ಶನಿವಾರ ಸಂಜೆ 7:30ಕ್ಕೆ ನಗರದ ಹೋಟೆಲ್ ಸೀ ವ್ಯೂವನ್ ಸಭಾಂಗಣದಲ್ಲಿ ಜರುಗಲಿರುವ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಭಾಪತಿ ರೋ. ಡಾ. ದೇವದಾಸ್ ರೈ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇರಳ ರಾಜ್ಯದ ಕಾಸರಗೋಡು ಮೂಲದ ಡಾ. ಆರ್. ಕೆ. ನಾಯರ್ ಭಾರತದ ಹಸಿರು ನಾಯಕ ಎಂದೇ ಖ್ಯಾತಿ ಪಡೆದಿದ್ದು, ದೇಶದ 12 ರಾಜ್ಯಗಳಲ್ಲಿ ಸಾವಿರಾರು ಎಕರೆ ಬಂಜರು ಭೂಮಿಯನ್ನು ಜಪಾನ್ ರಾಷ್ಟ್ರದ ಮಾದರಿಯ ‘ಮಿಯಾವಾಕಿ’ ಅರಣ್ಯ ಪ್ರದೇಶವಾಗಿ ಪರಿವರ್ತಿಸಿದ ಅಪ್ರತಿಮ ಸಾಧನೆ ಮಾಡಿದ್ದಾರೆ. ಅವರ ಈ ಅಮೂಲ್ಯ ಪರಿಸರ ಸೇವೆ ಮತ್ತು ಗಣನೀಯ ಸಾಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದ್ದು, ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಶಸ್ತಿ ವಿಜೇತರನ್ನು ಅಭಿನಂದಿಸಲಿದ್ದಾರೆ.

ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷರಾದ ರೋ. ಭಾಸ್ಕರ್ ರೈ ಕಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ರೋಟರಿ ಜಿಲ್ಲೆ 3181ರ ಸಹಾಯಕ ಗವರ್ನರ್ ರೋ. ಪೋ. ಡಾ. ಚೆನ್ನಗಿರಿ ಗೌಡ ಮತ್ತು ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ರೋ. ಪ್ರಜ್ವಲ್ ಆರ್. ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರೋಟರಿ ಸಂಸ್ಥೆಯು ಪ್ರತಿ ವರ್ಷ ಕ್ರೀಡೆ, ಶಿಕ್ಷಣ, ಕಲೆ, ವಿಜ್ಞಾನ ಮತ್ತು ಸಮಾಜ ಸೇವೆಯಂತಹ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಈ ‘ವಂದನಾ ಪ್ರಶಸ್ತಿ’ಯನ್ನು ಪ್ರದಾನ ಮಾಡುತ್ತಾ ಬಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕಾರ್ಯದರ್ಶಿ ರೋ. ವಿಕಾಸ್ ಕೋಟ್ಯಾನ್, ರೋಟರಾಕ್ಟ್ ಅಧ್ಯಕ್ಷ ರೋ. ಅಕ್ಷಯ್ ಬಿ. ರೈ ಮತ್ತು ಮಾಧ್ಯಮ ಸಲಹೆಗಾರರಾದ ರೋ. ಎಂ. ವಿ. ಮಲ್ಯ ಉಪಸ್ಥಿತರಿದ್ದರು.