
ಮಂಗಳೂರು: ”ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಅಮಾಯಕ ಯುವಕ ಅಬ್ದುಲ್ ರಹೀಮ್ ಹತ್ಯೆಯಲ್ಲಿ ಭಾಗಿಯಾಗಿರುವ ಭರತ್ ಕುಮ್ಡೇಲ್ ಸಹಿತ ಎಲ್ಲ ಆರೋಪಿಗಳನ್ನು ಪೊಲೀಸ್ ಇಲಾಖೆ ಇಂದು ರಾತ್ರಿಯ ಒಳಗೆ ಬಂಧಿಸಬೇಕು, ಇಂದು ರಾತ್ರಿಯವರೆಗೆ ಆರೋಪಿಗಳ ಬಂಧನವಾಗದೇ ಇದ್ದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಲ್ಲದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು“ ಎಂದು ಎಸ್ ಡಿಪಿಐ ಮುಖಂಡ ಅನ್ವರ್ ಸಾದಾತ್ ಬಜತ್ತೂರು ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಸಿದ್ದಾರೆ.
”ಬಜ್ಪೆಯಲ್ಲಿ ರೌಡಿಗಳಿಂದ ಕೊಲೆಯಾದ ಸುಹಾಸ್ ಶೆಟ್ಟಿ ಒಬ್ಬ ರೌಡಿಶೀಟರ್, ಹಿಂದೂ ಯುವಕ ಕೀರ್ತನ್, ಅಮಾಯಕ ಮುಸ್ಲಿಂ ಯುವಕ ಫಾಝಿಲ್ ಹತ್ಯೆಯಲ್ಲಿ ಆತನ ನೇರ ಭಾಗಿಯಾಗಿ ಜೈಲು ಸೇರಿದ್ದವನು. ಐದಾರು ಗಂಭೀರ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದವನು. ಅವನ ಕೊಲೆಯನ್ನು ಜಿಲ್ಲೆಯಲ್ಲಿ ಗುಂಪು ಹತ್ಯೆಗೊಳಗಾದ ವಯನಾಡ್ ನ ಅಶ್ರಫ್ ಮತ್ತು ಕೊಳತ್ತಮಜಲಿನ ಅಬ್ದುಲ್ ರಹೀಮ್ ನಂತಹ ಅಮಾಯಕರ ಸಾವಿಗೆ ಹೋಲಿಕೆ ಮಾಡುವುದು ಬೇಡ. ರೌಡಿಶೀಟರ್ ಸತ್ತಾಗ ಬೃಹತ್ ಪ್ರತಿಭಟನೆಗೆ ಅವಕಾಶ ಕೊಡುವುದು, ಕೋಮು ಪ್ರಚೋದನೆ ಭಾಷಣಕ್ಕೆ ಅವಕಾಶ ಕೊಡುವುದು ಯಾಕೆ? ಇದು ರಾಜ್ಯ ಸರಕಾರ, ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲೆಯ ರಾಜಕಾರಣಿಗಳ ಸಂಪೂರ್ಣ ನಿಷ್ಕ್ರಿಯತೆಯಾಗಿದೆ ಎಂದರು.

ರಿಯಾಜ್ ಕಡಂಬು ಮಾತಾಡಿ, “ರಾಜ್ಯ ಸರಕಾರಕ್ಕೆ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯ ವಾತಾವರಣದ ಅಗತ್ಯವಿಲ್ಲ. ಏನಿದ್ದರೂ ಪರಸ್ಪರ ಧರ್ಮದ ಹೆಸರಲ್ಲಿ ಜಗಳ ಮಾಡಿಕೊಂಡು ಸಾಯಬೇಕು. ಆಗ ಮಾತ್ರ ಇವರ ರಾಜಕೀಯ ಬೆಳೆಯುತ್ತದೆ. ಇದನ್ನು ಎಲ್ಲಾ ಧರ್ಮಗಳ ಜನರು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ. ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹೀಮ್ ಮನೆಗೆ ಸರಕಾರದ ಯಾವ ಪ್ರತಿನಿಧಿ ಕೂಡ ಭೇಟಿ ಕೊಟ್ಟಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು ಟೂರ್ ಬಂದ ಹಾಗೆ ಬರುತ್ತಾರೆ ಕೊಲೆ ವೈಯಕ್ತಿಕ ದ್ವೇಷದಿಂದ ಆಗಿದೆ ಎನ್ನುತ್ತಾರೆ. ಗೃಹ ಸಚಿವರಿಗೆ ಬಿಜೆಪಿ ಜೊತೆ ಹೊಂದಾಣಿಕೆಯಿದೆ. ಕೂಡಲೇ ರಾಜ್ಯ ಸರಕಾರ ರಹೀಮ್ ಕುಟುಂಬಕ್ಕೆ ಪರಿಹಾರ ಕೊಡಬೇಕು. ಆರೋಪಿಗಳ ಹಿಂದೆ ಇರುವವರನ್ನು ಬಂಧಿಸಬೇಕು“ ಎಂದರು.
ಜಲೀಲ್ ಕೃಷ್ಣಾಪುರ, ಅಶ್ರಫ್ ಅಡ್ಡೂರು ಮತ್ತಿತರರು ಉಪಸ್ಥಿತರಿದ್ದರು.
ವಿಡಿಯೋ ವೀಕ್ಷಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: