ಮಂಗಳೂರು: ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೂರ್ಯನಾರಾಯಣ ದೇವಸ್ಥಾನ ದೇವರಗುಡ್ಡೆ ಮಣೇಲ್(ಮಳಲಿ)ಗೆ ಉಡುಪಿಯ ಸೋದೆ ವಾದಿರಾಜ ಮಠ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಭೇಟಿ ನೀಡಿ ಇಂದು ದೇವರ ದರ್ಶನ ಪಡೆದರು.
ಮಣೇಲ್ ದೇವರಗುಡ್ಡೆಯಲ್ಲಿ ಶ್ರೀಸೂರ್ಯನಾರಾಯಣ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ದಿವ್ಯ ಸಾನಿಧ್ಯ ನಿರ್ಮಾಣವಾಗಲಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ದೇಗುಲಕ್ಕೆ ಭೇಟಿ ನೀಡಿ ದೇವಸ್ಥಾನ ಪುನರ್‌ನಿರ್ಮಾಣದ ಕುರಿತಂತೆ ಮಾಹಿತಿ ಪಡೆದು ಅಗತ್ಯ ಸೂಚನೆಗಳನ್ನು ನೀಡಿದರು.
ಪುರಾತನ ಕಾಲದ 13ನೇ ಶತಮಾನದಲ್ಲಿ ಆಳಿದ ಆಳುಪ ರಾಜವಂಶ ದೊರೆ ರಾಜ ಕುಲಶೇಖರನ ಕಾಲದಲ್ಲಿ ಸ್ಥಾಪಿಸಲ್ಪಟ್ಟು, ಮಣೇಲ್ ರಾಣಿ ಉಳ್ಳಾಲ ಅಬ್ಬಕ್ಕನ ಕಾಲದಲ್ಲಿ ವಿಜೃಂಭಣೆಯಿಂದ ಪೂಜೆಗೊಂಡ ಶ್ರೀ ಸೂರ್ಯನಾರಾಯಣ ದೇವರ ದೇವಸ್ಥಾನವು, ದೇವರ ಗುಡ್ಡೆ ಪ್ರದೇಶದಲ್ಲಿದ್ದು, ಕಾಲಕ್ರಮೇಣ 400 ವರ್ಷಗಳ ಹಿಂದೆ ಅವಸಾನ ಹೊಂದಿರುತ್ತದೆ ಎಂದು ಚರಿತ್ರೆ, ಇತಿಹಾಸ ಮತ್ತು ಅಷ್ಟಮಂಗಲ ಪ್ರಶ್ನೆ ಚಿಂತನೆ ಮುಖಾಂತರ ತಿಳಿದು ಬಂದಿದೆ.
ಪ್ರಸ್ತುತ ಈ ಪುಣ್ಯಭೂಮಿಯಲ್ಲಿ ದೇವಸ್ಥಾನ ವನ್ನು ಪುನಃ ರಚಿಸುವ ಪ್ರಯುಕ್ತ ಮಣೇಲ್ ಶ್ರೀ ಸೂರ್ಯನಾರಾಯಣ ದೇವಸ್ಥಾನ ಟ್ರಸ್ಟ್ ರಚಿಸಲಾಗಿದ್ದು, ಈಗಾಗಲೇ ಹಲವು ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲಾಗಿದ್ದು, ದೇವಸ್ಥಾನ ನಿರ್ಮಿಸಲು ಊರವರು ಮುಂದಾಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಉಡುಪಿಯ ಸೋದೆ ವಾದಿರಾಜ ಮಠ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ದೇವಸ್ಥಾನಕ್ಕೆ ಭೇಟಿ ನೀಡಿದರು. ಊರ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.