ನವದೆಹಲಿ: ʻ ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಏರ್ ಸ್ಟ್ರೈಕ್ ನಡೆಸಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಯಮಪುರಿಗಟ್ಟಿದ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ತೆಕ್ಕೆಗೆ ಪಡೆಯುವಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಪೂರಕ, ಎಂಬಂತೆ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಮಾತ್ರ ಅಲ್ಲ, ಪಿಕ್ಚರ್ ಅಭಿ ಬಾಕಿ ಹೈ ಎಂದು ಮಾಜಿ ಸೇನಾ ಮುಖ್ಯಸ್ಥ ಮನೋಜ್ ನರವಾಣೆ ಪಾಕ್ ಉಗ್ರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದು, ಮತ್ತೆ ದಾಳಿ ನಡೆಯುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
“ಅಭೀ ಪಿಕ್ಚರ್ ಬಾಕಿ ಹೈ…”
ಜನರಲ್ ನರವಾಣೆ ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ “ಅಭೀ ಪಿಕ್ಚರ್ ಬಾಕಿ ಹೈ…” ಎಂದು ಪೋಸ್ಟ್ ಮಾಡಿದ್ದು, ಭಾರತವು ಭಯೋತ್ಪಾದಕರ ವಿರುದ್ಧ ಮತ್ತಷ್ಟು ಯೋಜಿತ ಕಾರ್ಯಾಚರಣೆಗಳನ್ನು ನಡೆಸಬಹುದು ಎಂಬ ಸಂದೇಶವನ್ನು ನೀಡಿದೆ. ಕೆಲವು ನೆಟ್ಟಿಗರು ಇದನ್ನು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ವಶಪಡಿಸಿಕೊಳ್ಳುವ ಸಾಧ್ಯತೆಯ ಸೂಚನೆಯಾಗಿ ಪರಿಗಣಿಸಿದ್ದಾರೆ.
ರಕ್ಷಣಾ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, “ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿದೆ. ಒಟ್ಟು ಒಂಬತ್ತು ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ.” ಈ ಕಾರ್ಯಾಚರಣೆಯು “ಗುರಿಯತ್ತ ತಿರುಗಿದ, ಸಂಯಮಿತ ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸದ” ಸ್ವರೂಪದ್ದಾಗಿದ್ದು, ಪಾಕಿಸ್ತಾನದ ಯಾವುದೇ ಸೇನಾ ಸೌಲಭ್ಯಗಳ ಮೇಲೆ ದಾಳಿ ನಡೆಸಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವರದಿಗಳ ಪ್ರಕಾರ, ಈ ದಾಳಿಗಳಲ್ಲಿ ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್‌ನ ಕುಟುಂಬದ 14 ಸದಸ್ಯರು ಕೊಲ್ಲಲ್ಪಟ್ಟಿದ್ದಾರೆ. ಮಸೂದ್ ಅಝರ್ ಭಾರತದಲ್ಲಿ ಹಲವು ಭಯೋತ್ಪಾದಕ ದಾಳಿಗಳನ್ನು ಯೋಜಿಸಿದ ಮಾಸ್ಟರ್‌ಮೈಂಡ್ ಆಗಿದ್ದಾನೆ.