ನವದೆಹಲಿ: ಪಾಕಿಸ್ತಾನದ ಮೇಲೆ ಭಾರತ ಜಲಬಾಂಬ್ ಪ್ರಯೋಗಿಸಿದ್ದು, ಪಾಕಿಸ್ತಾನ ಅಕ್ಷರಶಃ ತತ್ತರಿಸಿಹೋಗಿದೆ. ಅದು ಹೇಗೆಂದರೆ ಅಂದಾಜು 24 ಗಂಟೆಗಳ ಕಾಲ ಪಾಕಿಸ್ತಾನಕ್ಕೆ ನೀರು ಬಂದ್ ಮಾಡಿದ್ದ ಭಾರತ ಮಂಗಳವಾರ ಬೆಳಗ್ಗೆ ಯಾವುದೇ ಸೂಚನೆ ನೀಡದೇ ತನ್ನ ಡ್ಯಾಮ್‌ಗಳಿಂದ ನೀರನ್ನು ಬಿಟ್ಟಿದೆ. ಇದರಿಂದಾಗಿ ಚೆನಾಬ್ ನದಿ ನೀರಿನ ಮಟ್ಟದಲ್ಲಿ ವ್ಯಾಪಕ ಏರಿಕೆಯಾಗಿದ್ದು, ಪಾಕಿಸ್ತಾನದ ಕೆಲವು ಪ್ರದೇಶಗಳಿಗೆ ಫ್ಲಡ್ ಅಲರ್ಟ್ ನೀಡಲಾಗಿದೆ.
ಈ ಬಗ್ಗೆ ವರದಿ ಮಾಡಿರುವ ಪಾಕಿಸ್ತಾನದ ವೆಬ್‌ಸೈಟ್, ʻಸುಮಾರು 24 ಗಂಟೆಗಳ ಕಾಲ ನೀರನ್ನು ತಡೆಹಿಡಿದ ಆನಂತರ, ಭಾರತವು ಇದ್ದಕ್ಕಿದ್ದಂತೆ ಚೆನಾಬ್ ನದಿಗೆ ದೊಡ್ಡ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಿತು, ಇದು ಪಾಕಿಸ್ತಾನದಲ್ಲಿ ಸಂಭವನೀಯ ಪ್ರವಾಹದ ಎಚ್ಚರಿಕೆಯನ್ನು ಹೆಚ್ಚಿಸಿತು’ ಎಂದು ಹಮ್ ವೆಬ್‌ಸೈಟ್ ವರದಿ ಮಾಡಿದೆ.
ಪಾಕಿಸ್ತಾನದ ನೀರಾವರಿ ಅಧಿಕಾರಿಗಳ ಪ್ರಕಾರ, ನದಿ ಬಹುತೇಕ ಒಣಗಿ ಹೋದ ಕೆಲವೇ ಗಂಟೆಗಳಲ್ಲಿ ಹೆಡ್ ಮರಾಲಾದಲ್ಲಿ ನೀರಿನ ಹರಿವು 28,000 ಕ್ಯೂಸೆಕ್‌ಗಳಿಗೆ ಏರಿದೆ. ಯಾವುದೇ ಸೂಚನೆ ನೀಡದೇ ನೀರು ಬಿಡುಗಡೆಯಿಂದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗಿದ್ದು, ಸ್ಥಳೀಯ ಅಧಿಕಾರಿಗಳು ಸಿಯಾಲ್‌ಕೋಟ್, ಗುಜರಾತ್ ಮತ್ತು ಹೆಡ್ ಖಾದಿರಾಬಾದ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಎಚ್ಚರಿಕೆಯನ್ನು ನೀಡಿದ್ದಾರೆ.
ಭಾರತವು ಬಾಗ್ಲಿಹಾರ್ ಅಣೆಕಟ್ಟಿನಿಂದ ಹರಿಯುವ ನೀರನ್ನು ನಿರ್ಬಂಧಿಸಿದೆ ಎಂದು ಆರೋಪಿಸಿ ಹೆಡ್ ಮರಾಲಾದಲ್ಲಿ ನೀರಿನ ಹರಿವು 5,300 ಕ್ಯೂಸೆಕ್‌ಗಳಿಗೆ ಗಣನೀಯವಾಗಿ ಕುಸಿದಿದೆ ಎಂದು ಹಿಂದಿನ ವರದಿಗಳು ಸೂಚಿಸಿದ್ದವು. ಈ ಹಠಾತ್ ಏರಿಳಿತವು ಭಾರತದ ನೀರು ನಿರ್ವಹಣಾ ಪದ್ಧತಿಗಳ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ, ಪಾಕಿಸ್ತಾನದ ತಜ್ಞರು ಹಠಾತ್ ಪ್ರವಾಹ ಮತ್ತು ಸಿಂಧೂ ಜಲ ಒಪ್ಪಂದದ ಉಲ್ಲಂಘನೆಯ ಬಗ್ಗೆ ಎಚ್ಚರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಅಖ್ನೂರ್‌ನಲ್ಲಿ ಎಚ್ಚರಿಕೆ ನೀಡುವ ಮೂಲಕ ಪ್ರತಿಕ್ರಿಯಿಸಿದರಾದರೂ, ಸಂಭಾವ್ಯ ಉಲ್ಬಣಕ್ಕೆ ಹೆದರಿ ನದಿ ದಂಡೆಯ ನಿವಾಸಿಗಳನ್ನು ಸ್ಥಳಾಂತರಿಸಿದರು.
ಪರಿಸ್ಥಿತಿಯನ್ನು ಪತ್ತೆಹಚ್ಚಲು ಸಿಂಧೂ ನದಿ ವ್ಯವಸ್ಥೆ ಪ್ರಾಧಿಕಾರ ಚೆನಾಬ್ ನದಿಯ ಒಳಹರಿವು ಮತ್ತು ಹೊರಹರಿವಿನ ನೈಜ-ಸಮಯದ ಮೇಲ್ವಿಚಾರಣೆಯನ್ನು ಪ್ರಾರಂಭಿಸಿದೆ. ಭಾರತದ “ಅನಿಯಮಿತ ಮತ್ತು ರಾಜಕೀಯ ಪ್ರೇರಿತ” ನೀರು ಬಿಡುಗಡೆಯಿಂದಾಗಿ ಮುಂಬರುವ ಗಂಟೆಗಳಲ್ಲಿ ನೀರಿನ ಮಟ್ಟಗಳು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ನದಿ ತೀರದಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಪಾಕಿಸ್ತಾನದ ಜಿಲ್ಲಾಡಳಿತಗಳು ಸೂಚಿಸಿದೆ.
ಸೋಮವಾರ ಇಡೀ ದಿನ ಪಾಕಿಸ್ತಾನಕ್ಕೆ ಭಾರತ ಒಂದು ಹನಿ ನೀರೂ ಕೂಡ ಬಿಟ್ಟಿರಲಿಲ್ಲ. ಬಾಗ್ಲಿಹಾರ್ ಅಣೆಕಟ್ಟಿನಲ್ಲಿ ಇದ್ದ ನೀರನ್ನು ಭಾರತ ತನ್ನ ಜಲವಿದ್ಯುತ್ ಯೋಜನೆ ಕಡೆಗೆ ವರ್ಗಾಯಿಸಿದ್ದವು. ಇದರಿಂದಾಗಿ ಚೆನಾಬ್ ನದಿ ಸಂಪೂರ್ಣ ಒಣಗಿ ಹೋಗಿತ್ತು. ಜನರು ಕಾಲ್ನಡಿಗೆಯಲ್ಲಿಯೇ ಚೆನಾಬ್ ನದಿಯನ್ನು ದಾಟುತ್ತಿರುವ ವಿಡಿಯೋಗಳು ಕೂಡ ಪ್ರಸಾರವಾಗಿದ್ದವು. ಪಾಕಿಸ್ತಾನ ಕೂಡ ಚೆನಾಬ್ ನದಿ ನೀರು ಬತ್ತಿ ಹೋಗಿದ್ದರ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.
ಇನ್ನೊಂದೆಡೆ ಭಾರತ ಈ ಪ್ರದೇಶದಲ್ಲಿರುವ ತನ್ನ ಎಲ್ಲಾ ಅಣೆಕಟ್ಟುಗಳಲ್ಲಿ ಕಾಮಗಾರಿಗಳನ್ನು ಆರಂಭಿಸಿದೆ. ಅದರ ಮೊದಲ ಹಂತವಾಗಿ ಇಡೀ ಅಣ್ಣೆಕಟ್ಟುಗಳಲ್ಲಿ ತುಂಬಿರುವ ಹೂಳುಗಳನ್ನು ತೆಗೆಯುವ ಕಾಮಗಾರಿ ಕೂಡ ಸೇರಿದೆ. ಇದರಿಂದಾಗಿ ಪಾಕಿಸ್ತಾನದ ಕಡೆಗೆ ದೊಡ್ಡ ಪ್ರಮಾಣದಲ್ಲಿ ಕೆಸರು ನೀರು ಹರಿದು ಹೋಗುತ್ತಿದ್ದು, ಇದೂ ಕೂಡ ಕೃಷಿ ಭೂಮಿಯ ಆತಂಕಕ್ಕೆ ಕಾರಣವಾಗಿದೆ ಎಂದು ಪಾಕಿಸ್ತಾನದ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.