ನವದೆಹಲಿ: ದೆಹಲಿಯಲ್ಲಿ ನವೆಂಬರ್ 10 ರಂದು ನಡೆದ ಕಾರ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಹೊಸ ಸುಳಿವು ಲಭಿಸಿದೆ. ಪ್ರಮುಖ ಆರೋಪಿ ಮೋಜಮ್ಮಿಲ್ ಗಣಾಯಿ ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಸುತ್ತಮುತ್ತ ಕನಿಷ್ಠ ನಾಲ್ಕು ಅಡಗು ತಾಣಗಳನ್ನು ಬಾಡಿಗೆಗೆ ಪಡೆದಿದ್ದ ಎಂಬ ಸುಳಿವು ತನಿಖಾ ಸಂಸ್ಥೆಗಳಿಗೆ ಲಭಿಸಿದೆ.

ಗಣಾಯಿ ಈಗಾಗಲೇ “ವೈಟ್ ಕಾಲರ್ ಟೆರರ್ ಮೋಡ್ಯೂಲ್” ಪ್ರಕರಣದಲ್ಲಿ ಬಂಧನದಲ್ಲಿದ್ದಾನೆ. ಇದೀಗ ಅವನು ಧೌಜ್ ಮತ್ತು ಫತೇಹ್‌ಪುರ್ ಟಾಗಾದಲ್ಲಿದ್ದ ವಾಸಸ್ಥಳಗಳ ಹೊರತಾಗಿ ಇನ್ನೆರಡು ಹೊಸ ತಾಣಗಳನ್ನು ಬಳಸಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ತನಿಖೆಯ ಪ್ರಕಾರ, ಹೊಸದಾಗಿ ಪತ್ತೆಯಾದ ಅಡಗುದಾಣಗಳಲ್ಲಿ ಮೊದಲನೆಯದ್ದು ಕೋರಿ ಜಮಾಲ್ಪುರ ಗ್ರಾಮದ ಮಾಜಿ ಸರ್ಪಂಚ್‌ರ 3BHK ಮನೆ. ಅಲ್-ಫಲಾಹ್ ವಿಶ್ವವಿದ್ಯಾಲಯದಿಂದ ಸುಮಾರು 4 ಕಿಮೀ ದೂರದಲ್ಲಿರುವ ಈ ಮನೆಯನ್ನು ಗಣಾಯಿ ಏಪ್ರಿಲ್–ಜುಲೈ 2025ರ ನಡುವೆ ಬಾಡಿಗೆಗೆ ತೆಗೆದುಕೊಂಡಿದ್ದ.
“ಒಬ್ಬಾತ ಮಹಿಳಾ ವೈದ್ಯರ ಜೊತೆಗೆ ಬಂದು ಕಾಶ್ಮೀರಿ ಹಣ್ಣು ವ್ಯವಹಾರ ಮಾಡಲು ಜಾಗ ಬೇಕು ಎಂದು ಕೇಳಿದ್ದಾಗಿ ಮಾಜಿ ಸರ್ಪಂಚ್ ಹೇಳಿದ್ದಾರೆ. ಅವನು ಮೂರು ತಿಂಗಳಿಗೆ ತಿಂಗಳಿಗೆ ₹8,000ದಂತೆ 3 ತಿಂಗಳು ವಾಸ ಮಾಡಿದ್ದ. ಆದರೆ 15 ದಿನದ ಬಾಡಿಗೆ ಪಾವತಿಸದೆ ಮನೆ ಖಾಲಿ ಮಾಡಿದ್ದ ಎಂದು ಅವರು ತನಿಖಾ ಸಂಸ್ಥೆಗಳ ಮುಂದೆ ಹೇಳಿದ್ದಾರೆ.

ರೈತನ ಜಮೀನಿನಲ್ಲಿದ್ದ ಸಣ್ಣ ಕೋಣೆಗೂ ಭೇಟಿ
ಇನ್ನೊಂದು ಅಡಗುದಾಣವಾಗಿ, ಒಬ್ಬ ರೈತನ ಜಮೀನಿನ ಮೇಲೆ ನಿರ್ಮಿಸಿದ್ದ ಸಣ್ಣ ಕೋಣೆಯನ್ನು ಗಣಾಯಿ ಬಳಸಿದ್ದಾನೆ. ಇಲ್ಲಿ ಸ್ಫೋಟಕ ಮತ್ತು ಅದರ ಸಂಬಂಧಿತ ವಸ್ತುಗಳನ್ನು ಸಂಗ್ರಹಿಸಲಾಗಿರುವು ಸಾಧ್ಯತೆ ಇದೆ ಎಂದು ತನಿಖಾ ತಂಡ ತಿಳಿಸಿದೆ.
ನಂತರ, ಈ ಸಾಮಗ್ರಿಗಳನ್ನು ಫತೇಹ್‌ಪುರ ಟಾಗಾ ಗ್ರಾಮದ ಮನೆಯ ಕಡೆಗೆ ಸ್ಥಳಾಂತರಿಸಿದ್ದಾನೆ ಎಂದು ಶಂಕಿಸಲಾಗಿದೆ. ಇದು ಯೋಜಿತ ದಾಳಿ ನಡೆಸಿ ತಲೆಮರೆಸಿಕೊಳ್ಳಲು ಈ ಉಪಾಯ ಹೂಡಿರುವ ಬಗ್ಗೆ ತನಿಖಾಧಿಕಾರಿಗಳು ಅನುಮಾನಿಸಿದ್ದಾರೆ.
NIA ವಿಚಾರಣೆ
ಘಟನೆ ಹಿನ್ನೆಲೆ, ರಾಷ್ಟ್ರೀಯ ತನಿಖಾ ಏಜೆನ್ಸಿ (NIA) ತಂಡ ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿ, ಮನೆ ಮಾಲೀಕರನ್ನು ಹಲವು ಗಂಟೆಗಳ ಕಾಲ ವಿಚಾರಿಸಿದೆ. ತನಿಖೆಯ ವ್ಯಾಪ್ತಿ ಈಗ ಹೆಚ್ಚಿನ ಮಟ್ಟಕ್ಕೆ ವಿಸ್ತರಿಸಿದ್ದು, ಆರೋಪಿ ಯಾರ ಸಹಾಯದಿಂದ ಮನೆಗಳನ್ನು ಬಾಡಿಗೆಗೆ ಪಡೆದನು ಎಂಬುದರ ಮೇಲೆ ಹೆಚ್ಚಿನ ಕೇಂದ್ರೀಕರಣವಾಗಿದೆ.
ಅಲ್-ಫಲಾಹ್ ವಿಶ್ವವಿದ್ಯಾಲಯದ ಸುತ್ತ ಹಲವು ಅಡಗುದಾಣ ಪತ್ತೆಯಾಗಿರುವುದು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಅವುಗಳ ಹೊರವಲಯಗಳನ್ನು ಘಾತುಕ ಚಟುವಟಿಕೆಗಳಿಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆತಂಕವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಅಧಿಕಾರಿಗಳು ಈಗ ಬಾಡಿಗೆ ಒಪ್ಪಂದಗಳನ್ನು ಯಾರು ವ್ಯವಸ್ಥೆ ಮಾಡಿದರು? ಸ್ಥಳಾಂತರ, ವಸ್ತು ಸಾಗಣೆಯಲ್ಲಿ ಯಾರ ಸಹಾಯವಿತ್ತು? ಹಾಗೂ ಇನ್ನೂ ಎಷ್ಟು ಮಂದಿಗೆ ಆರೋಪಿ ಸಂಪರ್ಕ ಹೊಂದಿದ್ದ? ಎನ್ನುವ ವಿಷಯಗಳನ್ನೂ ಸಂಪೂರ್ಣವಾಗಿ ಪರಿಶೀಲಿಸಲು ಮುಂದಾಗಿದ್ದಾರೆ.