ಡಿ. 4-5: ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಭೇಟಿ

ನವದೆಹಲಿ:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ್ರೆಮ್ಲಿನ್ ಉಲ್ಲೇಖಿಸಿ ರಷ್ಯಾದ ಅಧಿಕೃತ ಸುದ್ದಿ ಸಂಸ್ಥೆಗಳು ಇಂದು(ನ.28) ವರದಿ ಮಾಡಿದೆ. ಪುಟಿನ್ ಡಿಸೆಂಬರ್ 4 ಹಾಗೂ 5 ಒಟ್ಟು ಎರಡು ದಿನಗಳ ಕಾಲ ಭಾರತದಲ್ಲಿರಲಿದ್ದಾರೆ. ಈ ಮಾಹಿತಿಯನ್ನು ಭಾರತದ ವಿದೇಶಾಂಗ ಸಚಿವಾಲಯವೂ ಅಧಿಕೃತವಾಗಿ ದೃಢಪಡಿಸಿದೆ.

ಪುಟಿನ್ ಅವರು 23 ನೇ ಭಾರತ-ರಷ್ಯಾ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಷ್ಯಾ ಅಧ್ಯಕ್ಷರನ್ನು ಸ್ವಾಗತಿಸಿ ಅವರ ಗೌರವಾರ್ಥವಾಗಿ ಔತಣಕೂಟವನ್ನು ಆಯೋಜಿಸಲಿದ್ದಾರೆ.

ಪ್ರಧಾನಿ ಮೋದಿ ಕಳೆದ ವರ್ಷ ಜುಲೈನಲ್ಲಿ ಮಾಸ್ಕೋಗೆ ಭೇಟಿ ನೀಡಿದ್ದರೆ, ಪುಟಿನ್ ಕೊನೆಯ ಬಾರಿಗೆ 2021ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಬಾರಿ ಉಭಯ ದೇಶಗಳ ನಡುವೆ ನಡೆಯುವ ವಾರ್ಷಿಕ ಶೃಂಗಸಭೆಯ ಭಾಗವಾಗಿ ನಡೆಯುವ ಈ ಮಾತುಕತೆಯಲ್ಲಿ ಭಾರತ–ರಷ್ಯಾ ಸಂಬಂಧಗಳ ಪ್ರಗತಿ, ಭದ್ರತಾ ಸಹಕಾರ, ಆರ್ಥಿಕ-ವಾಣಿಜ್ಯ ವ್ಯವಹಾರಗಳು, ಇಂಧನ ಹಾಗೂ ಬಾಹ್ಯಾಕಾಶ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿನ ಪಾಲುದಾರಿಕೆಯನ್ನು ಬಲಪಡಿಸುವ ವಿಚಾರಗಳು ಚರ್ಚೆಯಾಗಲಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭಾರತವು ರಷ್ಯಾದಿಂದ ಹೆಚ್ಚುವರಿ S-400 ವಾಯು ರಕ್ಷಣಾ ಕ್ಷಿಪಣಿಯನ್ನು ಖರೀದಿಸಬಹುದು ಎಂದು ಹೇಳಲಾಗುತ್ತಿದೆ. ಭಾರತವು 2018 ರಲ್ಲಿ ಐದು ಘಟಕಗಳಿಗೆ 5 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತು. ಅದರಲ್ಲಿ ಮೂರು ರೆಜಿಮೆಂಟ್‌ಗಳನ್ನು ಈಗಾಗಲೇ ವಿತರಿಸಲಾಗಿದೆ. ಉಳಿದ ಎರಡು ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನಿ ವಾಯು ದಾಳಿಯನ್ನು ತಡೆಯುವಲ್ಲಿ ರಷ್ಯಾದ S-400 ವಾಯು ರಕ್ಷಣಾ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸಿದೆ.

ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಎರಡು ದೇಶಗಳ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ. “ಈ ಭೇಟಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖವಾಗಲಿದೆ” ಎಂದು ಸಚಿವಾಲಯವು ಹೇಳಿಕೆಯಲ್ಲಿದೆ.

error: Content is protected !!