ಹರಿಯಾಣ: ಭಾರತದಲ್ಲಿ ಕೋಟಿಗಟ್ಟಲೇ ಬೆಲೆ ಬಾಳುವ ದುಬಾರಿ ಕಾರುಗಳಿವೆ. ಅದೇ ರೀತಿ ದುಬಾರಿ ರಿಜಿಸ್ಟ್ರೇಶನ್ ನಂಬರ್‌ಗಳು ಇವೆ. ಇದೀಗ 30 ವರ್ಷದ ಹರಿಯಾಣ ಮೂಲದ ಯುವ ಉದ್ಯಮಿ ಸುಧೀರ್ ಕುಮಾರ್ 1.17 ಕೋಟಿ ನೀಡಿ HR88B8888 ನಂಬರ್ ಪ್ಲೇಟ್ ಖರೀದಿಸಿದ್ದಾರೆ.

ಸುಧೀರ್ ಕುಮಾರ್ ಟ್ರಾನ್ಸ್‌ಪೋರ್ಟ್ ಬ್ಯೂಸಿನೆಸ್ ಮತ್ತು ಸಾಫ್ಟ್‌ವೇರ್ ಕಂಪನಿಗಳನ್ನು ನಡೆಸುವ ಉದ್ಯಮಿ. HR88 B8888 ನಂಬರ್ ಪ್ಲೇಟ್ ಹರಾಜು ಹರ್ಯಾಣ ಆರ್‌ಟಿಒ ವತಿಯಿಂದ ನಡೆಯಿತು. ಹರಾಜಿನಲ್ಲಿ 45 ಮಂದಿ ಶ್ರೀಮಂತರು ಪಾಲ್ಗೊಂಡಿದ್ದರು. ಮೂಲ ಬೆಲೆ 50,000 ರೂ. ನಿಂದ ಪ್ರಾರಂಭವಾದ ಹರಾಜು ಮಧ್ಯಾಹ್ನ 88 ಲಕ್ಷ ರೂ. ತಲುಪಿತು, ಮತ್ತು ಸಂಜೆ 5 ಗಂಟೆಗೆ 1.17 ಕೋಟಿ ರೂ. ಗೆ ಅಂತ್ಯಗೊಂಡಿತು. ಹರಾಜಿನ ಸಮಯದಲ್ಲಿ ಸುಧೀರ್ ಕುಮಾರ್ ಮೊದಲು 11,000 ರೂ. ಪಾವತಿಸಿದ್ದರು, ಇದರಲ್ಲಿ ಹರಾಜು ರಿಜಿಸ್ಟ್ರೇಶನ್ ಶುಲ್ಕ ಹಾಗೂ ಭದ್ರತಾ ಠೇವಣಿ ಸೇರಿತ್ತು. ಇದೀಗ ಅವರಿಗೆ ಐದು ದಿನಗಳ ಒಳಗೆ ಸಂಪೂರ್ಣ 1.17 ಕೋಟಿ ರೂ. ಪಾವತಿಸಬೇಕಾಗಿದೆ.

ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ, ಸುಧೀರ್ ಕುಮಾರ್ ನಂಬರ್ ಪ್ಲೇಟ್ ಹೊಂದುವ ಹೊಸ ವಾಹನ ಯಾವುದು ಎಂದು ಹಲವರು ಪ್ರಶ್ನಿಸಿದ್ದಾರೆ. ಕೆಲವರು ರೋಲ್ಸ್ ರಾಯ್ಸ್ ಕ್ಯಾಲಿನಾನ್, ಘೋಸ್ಟ್, ಬೆಂಟ್ಲಿ ಮುಂತಾದ ಕಾರುಗಳನ್ನು ಸೂಚಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಈ ರೀತಿಯ ದುಬಾರಿ ನಂಬರ್ ಪ್ಲೇಟ್ ಖರೀದಿಗಳು ಹೆಚ್ಚಾಗಿ ಉದ್ಯಮಿಗಳು ಮತ್ತು ಶ್ರೀಮಂತರು ಮಾಡುತ್ತಿದ್ದಾರೆ. ಇತ್ತೀಚೆಗೆ ಕೇರಳದ ಟೆಕ್ ಉದ್ಯಮಿ ವೇಣು ಗೋಪಾಲಕೃಷ್ಣನ್ ತಮ್ಮ ಲ್ಯಾಂಬೋರ್ಗಿನಿ ಉರುಸ್ ಕಾರಿಗೆ KL 07 DG 0007 ನಂಬರ್ ಪ್ಲೇಟ್ ಖರೀದಿಸಿದ್ದರು.