ಶಬರಿಮಲೆ ಪ್ರವೇಶಕ್ಕೆ ಪಾಸ್‌ ಕಡ್ಡಾಯ- ಜೊತೆಗೆ ಹಲವು ಷರತ್ತುಗಳು!

ಕೊಚ್ಚಿ: ಶಬರಿಮಲೆ ಯಾತ್ರೆ ವೇಳೆ ಹೆಚ್ಚುತ್ತಿರುವ ಜನಸಂದಣಿ ಮತ್ತು ನಕಲಿ ಪಾಸ್‌ಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿದ ಕೇರಳ ಹೈಕೋರ್ಟ್, “ ವರ್ಚುವಲ್ ಕ್ಯೂ ಮತ್ತು ಸ್ಪಾಟ್ ಬುಕಿಂಗ್ ಪಾಸ್‌ಗಳನ್ನು ಹೊಂದಿರುವ ಯಾತ್ರಿಕರಿಗೆ ಮಾತ್ರ ಸನ್ನಿಧಾನ ಪ್ರವೇಶ ಅನುಮತಿ ನೀಡಬೇಕು” ಎಂದು ಖಡಕ್ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ವಿ. ರಾಜಾ ವಿಜಯರಾಘವನ್ ಹಾಗೂ ಕೆ.ವಿ. ಜಯಕುಮಾರ್ ಅವರನ್ನೊಳಗೊಂಡ ದೇವಸ್ವಂ ಪೀಠವು ಪಾಸ್‌ನಲ್ಲಿ ನಮೂದಿಸಿರುವ ದಿನಾಂಕ–ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸ್ಪಷ್ಟ ಸೂಚಿಸಿದೆ.

ನಕಲಿ ಪಾಸ್‌ಗಳೊಂದಿಗೆ ಬರುವವರನ್ನು ಯಾವುದೇ ಕಾರಣಕ್ಕೂ ಒಳಗೆ ಬಿಡಬಾರದು ಎಂದು ನ್ಯಾಯಾಲಯ ಎಚ್ಚರಿಸಿದೆ. “ಆಡಳಿತಾತ್ಮಕ ನಿರ್ಲಕ್ಷ್ಯದಿಂದ ಲಕ್ಷಾಂತರ ಯಾತ್ರಿಕರ ಜೀವಕ್ಕೆ ಅಪಾಯ ಉಂಟಾಗುವಂತೆ ಮಾಡಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯ ಹೇಳಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ ಹಾಗೂ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದೆ.

ಹೈಕೋರ್ಟ್ ವಿಧಿಸಿದ್ದಂತೆ, ಪ್ರತಿದಿನ 70,000 ವರ್ಚುವಲ್ ಕ್ಯೂ ಮತ್ತು 5,000 ಸ್ಪಾಟ್ ಬುಕಿಂಗ್ ಪಾಸ್‌ಗಳ ಮಿತಿಯನ್ನು ನಿಗದಿಪಡಿಸಲಾಗಿತ್ತು. ಆದರೆ, ಯಾತ್ರಿಕರ ಸಂಖ್ಯೆ ಮತ್ತು ನಿಯಂತ್ರಣದ ಸಡಿಲತೆಯಿಂದಾಗಿ ಕಳೆದ ಕೆಲವು ದಿನಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಸನ್ನಿಧಾನ ತಲುಪಿರುವುದು ನ್ಯಾಯಾಲಯದ ಗಮನಕ್ಕೆ ಬಂತು.

ಶಬರಿಮಲೆ ವಿಶೇಷ ಆಯುಕ್ತರು ಸಲ್ಲಿಸಿದ ವರದಿಯಲ್ಲಿ 7,877 ಪಾಸ್‌ಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದೂ; ನಕಲಿ ಪಾಸ್‌ಗಳ ಬಳಕೆ ಹಾಗೂ ಗುಂಪುಗಳಲ್ಲಿ ಪಾಸ್‌ಗಳಿಲ್ಲದೆ ಆಗಮಿಸುವ ಘಟನೆಗಳನ್ನೂ ಉಲ್ಲೇಖಿಸಲಾಗಿದೆ. “ಇಂತಹ ಗುಂಪುಗಳನ್ನು ಒಟ್ಟಿಗೆ ಒಳಗಡೆ ಬಿಡುವ ಕ್ರಮವೇ ದೊಡ್ಡ ಸಮಸ್ಯೆಗೆ ಕಾರಣ,” ಎಂದು ಅಮಿಕಸ್ ಕ್ಯೂರಿ ನ್ಯಾಯಾಲಯದ ಗಮನಕ್ಕೆ ತಂದರು.

error: Content is protected !!