ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಪಹಲ್ಗಾಮ್ ದಾಳಿಯ ನಂತರ ಭಾರತ ಪಾಕಿಸ್ತಾನದ ಜೊತೆಗಿದ್ದ ಏಕೈಕ ರಸ್ತೆ ಮಾರ್ಗವಾದ ಅಟ್ಟಾರಿ ವಾಘಾ ಬಾರ್ಡರ್ ರೋಡನ್ನು ಮುಚ್ಚಿ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿಗಳಿಗೆ ದೇಶ ಬಿಟ್ಟು ಹೋಗುವಂತೆ ಹೇಳಿದ್ದಲ್ಲದೇ ಏಪ್ರಿಲ್ 29ರವರೆಗೆ ಗಡುವನ್ನು ಕೂಡ ನೀಡಿತ್ತು. ಆದರೆ ಪಾಕಿಸ್ತಾನ ಭಾರತದಿಂದ ಬಂದ ತನ್ನ ಪ್ರಜೆಗಳನ್ನು ತನ್ನ ದೇಶದೊಳಗೆ ಬಿಟ್ಟುಕೊಳ್ಳದೇ ಆ ಕಡೆಯ ಗೇಟನ್ನು ಬಂದ್ ಮಾಡಿದೆ ಎಂದು ವರದಿಯಾಗಿದ್ದು, ಇದರಿಂದ ಅಟ್ಟಾರಿ ವಾಘಾ ಬಾರ್ಡರ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಪಾಕಿಸ್ತಾನವು ಇಂದು ಬೆಳಗ್ಗೆ 8:00 ಗಂಟೆಯಿಂದ ತನ್ನ ಪ್ರಜೆಗಳನ್ನು ಒಳಗೆ ಬಿಟ್ಟುಕೊಳ್ಳುವ ಕೌಂಟರ್‌ಗಳನ್ನು ಮುಚ್ಚಿದೆ ಎಂದು ಭಾರತೀಯ ವಲಸೆ ಅಧಿಕಾರಿಗಳು ದೃಢಪಡಿಸಿದ್ದಾರೆ, ಇದರಿಂದಾಗಿ ನೂರಾರು ಪಾಕಿಸ್ತಾನಿ ಪ್ರಜೆಗಳು ಗಡಿಯಲ್ಲಿಯೇ ಸಿಲುಕಿಕೊಂಡಿದ್ದಾರೆ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪಾಕಿಸ್ತಾನಿ ನಾಗರಿಕರು ಈಗ ಯಾವುದೇ ಆಶ್ರಯ, ಆಹಾರ ಅಥವಾ ಅವರ ಸ್ಥಿತಿಯ ಬಗ್ಗೆ ಸ್ಪಷ್ಟತೆ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ತನ್ನದೇ ಪ್ರಜೆಗಳ ಒಳಗೆ ಸೇರಿಸಿಕೊಳ್ಳದೇ ಪಾಕಿಸ್ತಾನದ ಈ ಹಠಾತ್ ವರ್ತನೆಯಿಂದ ಅಟ್ಟಾರಿ ಪೋಸ್ಟ್‌ನಲ್ಲಿ ಆತಂಕ ಸೃಷ್ಟಿಯಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದು ಪಾಕಿಸ್ತಾನದ ನಾಚಿಕೆಗೇಡಿನ ಕೃತ್ಯ ಎಂದು ಅನೇಕರು ಕರೆದಿದ್ದಾರೆ.
ಪಾಕಿಸ್ತಾನದ ನಿಲುವಿಗೆ ವಿರುದ್ಧವಾಗಿ, ಭಾರತ ಸರ್ಕಾರವು ಮುಂದಿನ ಸೂಚನೆ ಬರುವವರೆಗೆ ಪಾಕಿಸ್ತಾನಿ ನಾಗರಿಕರು ಅಟ್ಟಾರಿ-ವಾಘಾ ಗಡಿಯ ಮೂಲಕ ತಮ್ಮ ದೇಶಕ್ಕೆ ತೆರಳಲು ಅವಕಾಶ ನೀಡಿದೆ. ಗೃಹ ಸಚಿವಾಲಯದ ಇತ್ತೀಚಿನ ಆದೇಶದಂತೆ ಏಪ್ರಿಲ್ 30 ರಿಂದ ಗಡಿಯನ್ನು ಮುಚ್ಚುವುದನ್ನು ಕಡ್ಡಾಯಗೊಳಿಸಿದ್ದ ತನ್ನ ಹಿಂದಿನ ನಿರ್ದೇಶನದಲ್ಲಿ ಬದಲಾವಣೆ ಮಾಡಲಾಗಿದೆ.