ಮಂಗಳೂರು: ಕುಡುಪುವಿನಲ್ಲಿ ಹಲ್ಲೆ ಮಾಡಿದ್ದು ಹಿಂದುಗಳೇ, ಮುಸ್ಲಿಮರೇ ಅಂತ ಗೊತ್ತಿಲ್ಲ, ಅಮಾಯಕ ಹಿಂದೂಗಳ ಬಂಧನವಾದ್ರೆ ಠಾಣೆಗೆ ಮುತ್ತಿಗೆ ಹಾಕುವ ಅಥವಾ ಇತರ ಗಂಭೀರ ರೀತಿಯಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಎಚ್ಚರಿಕೆ ನೀಡಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ದೇಶದಲ್ಲಿ ಪಾಕಿಸ್ತಾನದೊಂದಿಗೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಈ ಮಧ್ಯೆ ದೇಶದ ಒಳಗಡೆ ಇದ್ದುಕೊಂಡು ಉಗ್ರರಿಗೆ ಬೆಂಬಲ ನೀಡುವ ಮನಸ್ಥಿತಿಯ ವ್ಯಕ್ತಿಗಳ ವಿರುದ್ಧ ಜನರ ಆಕ್ರೋಶ ಕೂಡಾ ಹೆಚ್ಚಿದೆ. ಮುಂಬೈಯಲ್ಲಿ ಪಾಕಿಸ್ತಾನದ ಬಾವುಟ ಹಾಕಿದ್ದಕ್ಕೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ನಮ್ಮ ರಾಜ್ಯದಲ್ಲೂ ಇದೇ ಕಾರಣಕ್ಕೆ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ ಘಟನೆ ನಡೆದಿದೆ. ಈ ಸಮಯದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಯಾರೂ ಸುಮ್ಮನಿರುವುದಿಲ್ಲ. ಕುಡುಪು ಬಳಿ ನಡೆದ ಘಟನೆಯೂ ಇದೇ ರೀತಿ ಆಗಿದೆ. ಈ ಘಟನೆಯಲ್ಲಿ ಬಿಜೆಪಿಯ ರವೀಂದ್ರ ಎಂಬವರೇ ಪ್ರಧಾನ ಆರೋಪಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರೇ ನಿರ್ಣಯ ಮಾಡಿಕೊಂಡಿದ್ದಾರೆ. ಅಲ್ಲಿ ಹಲ್ಲೆ ಮಾಡಿದ್ದು ಹಿಂದುಗಳೇ ಅಥವಾ ಮುಸ್ಲಿಮರೇ ಗೊತ್ತಿಲ್ಲ ಒಟ್ಟಾರೆ ಆಕ್ರೋಶದಿಂದ ಈ ಘಟನೆ ನಡೆದಿದೆ. ಇದನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಖೇದಕರ ವಿಚಾರ ಎಂದು ಭರತ್ ಆರೋಪಿಸಿದರು.
ʻಪೊಲೀಸರು ಸರಕಾರದ ಆದೇಶಕ್ಕೆ ಮಣಿದು ನಮಗೆ ಇಷ್ಟು ಜನ ಕೊಡಿ, ಅಷ್ಟು ಜನ ಕೊಡಿ ಎನ್ನುತ್ತಿದ್ದಾರೆ. ಅದೆಂತ ಈರುಳ್ಳಿ ಕೊಡೋದ? ಸತ್ತವನು ಯಾರು ಅವನ ಹಿನ್ನೆಲೆ ಏನು ಎನ್ನುವುದನ್ನು ತಿಳಿಯದೆ ಅವನು ಮಾನಸಿಕ ಅಸ್ವಸ್ಥ ಎಂದು ಕರೆಯುತ್ತಾರೆ. ಇದೇ ಕಾಂಗ್ರೆಸಿಗರು ಹಿಂದೆ ಮಸೀದಿ ಮುಂದೆ ಹಿಂದೂಗಳ ಮೇಲೆ ಹಲ್ಲೆ ನಡೆದಾಗ ಎಲ್ಲಿದ್ದರು? ವೈದ್ಯೆ ಹಿಂದೂ ವಿರೋಧಿ ಹೇಳಿಕೆ ಕೊಟ್ಟಾಗ ಎಲ್ಲಿದ್ದರು ಎಂದು ಕಿಡಿಕಾರಿದ ಅವರು ಅಮಾಯಕ ಹಿಂದೂ ಯುವಕರ ಬಂಧನವಾದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಅಥವಾ ಇತರ ಗಂಭೀರ ರೀತಿಯಲ್ಲಿ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ.
ಪತ್ರಿಕಾಗೋಷ್ಟಿಯಲ್ಲಿ ಪ್ರೇಮಾನಂದ ಶೆಟ್ಟಿ, ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಯತೀಶ್ ಆಳ್ವ, ಸಂದೀಪ್ ಪಚ್ಚನಾಡಿ, ಲೋಹಿತ್ ಅಮೀನ್, ಮನೋಹರ್ ಶೆಟ್ಟಿ, ಅಶ್ರಿತ್ ನೋಂಡ, ರಣ್ ದೀಪ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.