ಸುರತ್ಕಲ್: ಬಜ್ಪೆ ಠಾಣಾ ವ್ಯಾಪ್ತಿಯ ಕಿನ್ನಿಪದವು ಎಂಬಲ್ಲಿ ಸುರತ್ಕಲ್ ನಲ್ಲಿ ನಡೆದಿದ್ದ ಫಾಝಿಲ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್ ಮೇಲೆ ತಂಡವೊಂದು ದಾಳಿ ನಡೆಸಿ ಬರ್ಬರ ಹತ್ಯೆಗೈದಿದ್ದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಜ್ಪೆ ಕಳವರ್ ನಿವಾಸಿ ಸುಹಾಸ್ ಶೆಟ್ಟಿ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು 2022ರಲ್ಲಿ ನಡೆದಿದ್ದ ಸುರತ್ಕಲ್ ಫಾಝಿಲ್ ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿದ್ದ.
ಗುರುವಾರ ರಾತ್ರಿ 8:25ರ ಸುಮಾರಿಗೆ ತನ್ನ ಸ್ನೇಹಿತರ ಜೊತೆಗೆ ಇನ್ನೋವಾ ಕಾರ್ ನಲ್ಲಿ ಹೋಗುತ್ತಿದ್ದ ಸುಹಾಸ್ ಶೆಟ್ಟಿಯನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಮೀನಿನ ಲಾರಿಯನ್ನು ಕಾರ್ ಗೆ ಡಿಕ್ಕಿ ಹೊಡೆಸಿವೆ. ಈ ವೇಳೆ ಕಾರ್ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಸೆಲೂನ್ ಗೆ ನುಗ್ಗಿದೆ. ಅಷ್ಟರಲ್ಲಿ ದಾಳಿ ನಡೆಸಿದ ಐದಾರು ಮಂದಿಯಿದ್ದ ತಂಡ ರಸ್ತೆಯಲ್ಲೇ ಕಡಿದು ಕೊಲೆಗೈದು ಪರರಿಯಾಗಿದೆ.
ಘಟನೆಯ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ನೂರಾರು ಮಂದಿ ಸಾರ್ವಜನಿಕರ ಸಮ್ಮುಖದಲ್ಲಿ ಘಟನೆ ನಡೆದಿದ್ದು ಕೃತ್ಯ ನಡೆಸಿದ ಬಳಿಕ ಬಿಳಿ ಬಣ್ಣದ ಸ್ವಿಫ್ಟ್ ಕಾರ್ ನಲ್ಲಿ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುಹಾಸ್ ಶೆಟ್ಟಿ ಫಾಝಿಲ್ ಹತ್ಯೆಯಲ್ಲಿ ಪ್ರಮುಖ ಆರೋಪಿಯೆಂದು ಗುರುತಿಸಲ್ಪಟ್ಟಿದ್ದು ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸುಹಾಸ್ ಶೆಟ್ಟಿ ಹತ್ಯೆ ನಡೆಯುವ ವೇಳೆ ಈತನ ಜೊತೆಗಿದ್ದವರು ಓಡಿ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಈ ಹಿಂದೆ ಈತನ ವಿರುದ್ಧ ಗಡಿಪಾರು ಆದೇಶ ಹೊರಡಿಸಲಾಗಿತ್ತು.