ಪತಿಯ ಉದ್ದ ಗಡ್ಡಕ್ಕೆ ಬೇಸತ್ತು ಮೈದುನನ ಜೊತೆ ಓಡಿ ಹೋದ ಯುವತಿ

ಮೀರತ್: ಗಂಡನ ಉದ್ದವಾದ ಗಡ್ಡದಿಂದ ಬೇಸತ್ತ ಮಹಿಳೆ ಆತನ ತಮ್ಮ ಅಂದರೆ ಮೈದುನನ ಜೊತೆ ಓಡಿ ಹೋದ ವಿಚಿತ್ರ ಘಟನೆ ಉತ್ತರ ಪ್ರದೇಶ ಮೀರತ್‌ನ ಉಜ್ವಲ ಗಾರ್ಡ್‌ನ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಮೀರತ್‌ನ ಉಜ್ವಲ ಗಾರ್ಡ್‌ ನಿವಾಸಿ ಶಕೀರ್ ಮೌಲ್ವಿ ಎಂಬಾತ 7 ತಿಂಗಳ ಹಿಂದೆಯಷ್ಟೇ ಆರ್ಷಿ ಎಂಬುವವಳನ್ನು ಮದುವೆಯಾಗಿದ್ದ. ಮದುವೆಯ ಆನಂತರ ಅರ್ಶಿ ತನ್ನ ಗಂಡನಿಗೆ ಗಡ್ಡ ತೆಗೆಯುವಂತೆ ಒತ್ತಾಯ ಮಾಡಿದ್ದಳು. ಆದರೆ ಶಕೀರ್‌ ಮೌಲ್ವಿ ಗಡ್ಡ ತೆಗೆಯಲಿಲ್ಲ. ಗಡ್ಡ ತೆಗೆದರೆ ಮಾತ್ರ ನಿನ್ನೊಂದಿಗೆ ವಾಸ ಮಾಡುವುದಾಗಿ ಆಕೆ ಪತಿ ಶಕೀರ್‌ಗೆ ಹೇಳಿದ್ದಾಳೆ. ಆದರೆ ನಾನೆಂದಿಗೂ ಗಡ್ಡ ತೆಗೆಯಲಾರೆ ಎಂದು ಗಂಡ ಹೇಳಿದ್ದಾನೆ.
ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಅಲ್ಲದೇ ಪತ್ನಿಯ ಕುಟುಂಬವೂ ಆತನಿಗೆ ಗಡ್ಡ ತೆಗೆಯುವಂತೆ ಒತ್ತಾಯಿಸಿತು. ಏನೇ ಆದರೂ ಗಡ್ಡ ತೆಗೆಯುವುದಿಲ್ಲ ಎಂದಾಗ ಆಕೆ, ನಿನ್ನನ್ನು ನನ್ನ ಕುಟುಂಬದ ಒತ್ತಾಯದ ಮೇರೆಗೆ ಮದುವೆಯಾಗಿದ್ದೇನೆ ಎಂದು ಹೇಳಿದ್ದಾಗಿ ಶಕೀರ್ ಮೌಲ್ವಿ ಆರೋಪ ಮಾಡಿದ್ದಾರೆ.

ಗಂಡನ ಗಡ್ಡದಿಂದ ಬೇಸತ್ತ ಅರ್ಶಿಗೆ ಈ ನಡುವೆ ಆತನ ಗಡ್ಡವಿಲ್ಲದ ತಮ್ಮನ ಮೇಲೆ ಆಸಕ್ತಿ ಬೆಳೆಯಿತು. ಈತನ ನುಣುಪಾದ ಕೆನ್ನೆಗೆ ಮಾರು ಹೋದ ಅರ್ಶಿ ಫೆಬ್ರವರಿ 3 ರಂದು ಆತನ ಜೊತೆ ಓಡಿ ಹೋಗಿದ್ದಾಳೆ ಎನ್ನಲಾಗಿದೆ. ಇದರಿಂದ ಶಕೀರ್ ಹಾಗೂ ಆತನ ಕುಟುಂಬಕ್ಕೆ ಆಘಾತವಾಗಿದೆ. ಇತ್ತ ಪತ್ನಿ ಸ್ವಂತ ತಮ್ಮನ (ಮೈದುನ) ಜೊತೆಯೇ ಓಡಿ ಹೋಗಿದ್ದರಿಂದ ಸಾಮಾಜಿಕವಾಗಿ ಮುಜುಗರ ಎದುರಿಸುವುದು ಬೇಡ ಎಂದು ಶಕೀರ್‌ ಪೊಲೀಸರಿಗೆ ದೂರು ನೀಡದೇ ತನ್ನ ಸಂಬಂಧಿಕರ ಸಹಾಯದಿಂದ ಅವರಿಬ್ಬರನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಅವರಿಬ್ಬರೂ ಇದುವರೆಗೂ ಸಿಗದ ಕಾರಣ ಏನು ಮಾಡುವುದೆಂದು ತಿಳಿಯದೆ ಹತಾಶನಾದ ಮೌಲ್ವಿ ಕೊನೆಗೂ ಪೊಲೀಸರಿಗೆ ತನ್ನ ಪತ್ನಿ ಹಾಗೂ ಸೋದರ ನಾಪತ್ತೆಯಾಗಿದ್ದಾರೆಂದು ನಾಪತ್ತೆ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮೌಲ್ವಿ ಪತ್ನಿ ಅರ್ಶಿಯ ಕುಟುಂಬಕ್ಕೆ ಮಾಹಿತಿ ನೀಡಿದಾಗ, ನಾವು ಅವಳೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದಾಗಿ ಅವರು ಹೇಳಿದ್ದಲ್ಲದೆ, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದಾರೆ. ಅರ್ಶಿ ಈಗ ತನ್ನಿಂದ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾಳೆ ಎಂದು ಶಕೀರ್ ಆರೋಪಿಸಿದ್ದಾರೆ. ಮೀರತ್‌ನ ಎಸ್‌ಪಿ ಆಯುಷ್‌ ವಿಕ್ರಂ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!