ಎಲ್ಲಿ, ಎಂತಹಾ ಪೊಲೀಸ್‌ ಅಧಿಕಾರಿ ಇರಬೇಕೆಂದು ಸರ್ಕಾರಕ್ಕೆ ಗೊತ್ತಿರಬೇಕು: ಕುಡುಪು ಗುಂಪು ಹತ್ಯೆ ಬಗ್ಗೆ ರೈ ಆಕ್ರೋಶ

ಮಂಗಳೂರು: ಕುಡುಪುವಿನ ಕ್ರಿಕೆಟ್‌ ಪಂದ್ಯಾಟದ ವೇಳೆ ಕೇರಳದ ವಯನಾಡು ಪುಳುಪಳ್ಳಿ ನಿವಾಸಿ ಮೊಹಮ್ಮದ್‌ ಅಶ್ರಫ್‌ ಗುಂಪು ಹತ್ಯೆ ಪ್ರಕರಣವನ್ನು ಮಾಜಿ ಸಚಿವ ರಮಾನಾಥ ರೈ ಖಂಡಿಸಿದ್ದು, ತಮ್ಮದೇ ಸರ್ಕಾರದ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಮಂಗಳೂರಿನ ಕಾಂಗ್ರೆಸ್‌ ಕಚೇರಿ ಬಳಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ಕೊಲೆಗೆ ಪ್ರಚೋದನೆ ನೀಡಿದವರ ವಿರುದ್ಧ ಆಕ್ರೋಶಿತರಾಗಿ ಮಾತನಾಡಿದರು. ಇದೇ ವೇಳೆ ಅವರು ಜಿಲ್ಲೆಯಲ್ಲಿ, ಎಂತಹಾ ಪೊಲೀಸ್‌ ಅಧಿಕಾರಿ ಇರಬೇಕೆಂದು ಸರ್ಕಾರಕ್ಕೆ ಗೊತ್ತಿರಬೇಕು ಎಂದು ಪೊಲೀಸರ ವೈಫಲ್ಯದ ವಿರುದ್ಧ ಕಿಡಿಕಾರಿದರು.

ಕುಡುಪು ಗುಂಪು ಹತ್ಯೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರಮಾನಾಥ ರೈ ಅವರು, ಈ ಪ್ರಕರಣದಲ್ಲಿ ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಹಲ್ಲೆಗೆ ಪ್ರಚೋದನೆ ನೀಡಿದವರ ಬಂಧನ ನಡೆದಿಲ್ಲ. ಈ ರೀತಿ ಪ್ರೋಚದನೆ ನಡೆಸಿದವರಿಗೆ ಶಿಕ್ಷೆ ನೀಡುವಂತಾಗಲು ಎಸ್‌ಐಟಿ ತಂಡವನ್ನು ರಚಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆದರೆ ಅದು ಇಡೀ ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಇಲ್ಲಿ ನಡೆದಿರುವ ಗುಂಪು ಥಳಿತದಿಂದ ಯುವಕನ ಸಾವು ಪ್ರಕರಣ ವಿಷಾದನೀಯವಾದುದು. ಇಲ್ಲಿ ನಡೆದಿರುವ ಪಬ್ ದಾಳಿ, ಚರ್ಚ್ ದಾಳಿ, ಧರ್ಮಾಧಾರಿತ ಕೊಲೆ ಪ್ರಕರಣಗಳು ಜಿಲ್ಲೆಗೆ ಅವಮರ್ಯಾದೆ ಉಂಟುಮಾಡಿದೆ. ಇಲ್ಲಿ ನಡೆದಿರುವುದು ಕೋಮು ಘರ್ಷಣೆಯಲ್ಲ ಬದಲಿಗೆ ʻಟಾರ್ಗೆಟೆಡ್ ಕಿಲ್ಸ್ʼ . ಜಿಲ್ಲೆಯಲ್ಲಿ ನಡೆದಿರುವ ಈ ಎಲ್ಲ ಹತ್ಯೆಗಳ ಹಿಂದೆ ಯಾರಿದ್ದಾರೆ ಅನ್ನುವುದನ್ನು ತಿಳಿಯಲು ಎಸ್ ಐಟಿ ರಚನೆಯಾಗಲು ಹಿಂದೆಯೇ ಆಗ್ರಹಿಸಿದ್ದೆ, ಈಗಲೂ ಆಗ್ರಹಿಸುತ್ತಿದ್ದೇನೆ. ಒಬ್ಬನ ಹತ್ಯೆಗೆ ಪ್ರತೀಕಾರವಾಗಿ ಇನ್ನೊಬ್ಬನ ಹತ್ಯೆ ನಡೆದರೆ ಜಿಲ್ಲೆಯಲ್ಲಿ ಶಾಂತಿ ನೆಲೆಸುವುದಿಲ್ಲ. ಎಸ್ ಐಟಿ ರಚನೆ ಮಾಡಿ ತನಿಖೆ ನಡೆದರೆ ಇದರ ಹಿಂದಿರುವವರು ಕಂಬಿಯ ಹಿಂದೆ ಹೋದರೆ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ತಿಳಿಸಿದರು.

ಗುಂಪು ಹತ್ಯೆಗೆ ಆತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದೇ ಕಾರಣ ಎನ್ನುತ್ತಿದ್ದಾರೆ. ಆದರೆ ಇದು ಕೊಂದವನಿಗೆ ಗೊತ್ತಿದೆ. ಹೀಗಾಗಿ ಕಠಿಣ ಕ್ರಮ ಕೈಗೊಂಡು ಆರೋಪಿಗಳನ್ನು ಸರಿಯಾಗಿ ವಿಚಾರಣೆ ನಡೆಸಬೇಕು ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಧರ್ಮಾಧಾರಿತ ಹತ್ಯೆ ತಡೆಯಲು ಎಸ್ ಐಟಿ ರಚನೆ ಆಗಲಿ ಎಂದು ರಮಾನಾಥ ರೈ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಾಜಿ ಮೇಯರ್ ಅಶ್ರಫ್, ಅಬ್ಬಾಸ್ ಅಲಿ, ಯೋಗೀಶ್, ಪಿಯೂಸ್, ಫಾರೂಕ್, ನಿತ್ಯಾನಂದ, ಶಾಹುಲ್ ಹಮೀದ್, ಬೇಬಿ ಕುಂದರ್, ಇಸ್ಮಾಯಿಲ್, ಮಂಜುಳಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!