ಮಂಗಳೂರು: ಇತ್ತೀಚೆಗೆ ಕುಡುಪು ಸಮೀಪ ಗುಂಪು ಹಲ್ಲೆಗೊಳಗಾಗಿ ಸಾವನ್ನಪ್ಪಿದ ಕೇರಳದ ವಯನಾಡು ಪುಳುಪಳ್ಳಿ ನಿವಾಸಿ ಮೊಹಮ್ಮದ್ ಅಶ್ರಫ್ ಪ್ರಕರಣಕ್ಕೆ ಸಂಬಂಧಿಸಿ ಇನ್ಸ್‌ಪೆಕ್ಟರ್ ಸಹಿತ ಮೂವರನ್ನು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಕರ್ತವ್ಯ ಲೋಪದಡಿ ಅಮಾನತು ಮಾಡಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಕೆ ಆರ್, ಹೆಡ್‌ಕಾನ್‌ಸ್ಟೇಬಲ್ ಚಂದ್ರ ಪಿ. ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಯಲ್ಲಾಲಿಂಗ ಅಮಾನತುಗೊಂಡಿದ್ದಾರೆ. ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪೊಲೀಸರು 20 ಮಂದಿಯನ್ನು ಬಂಧಿಸಿದ್ದು, ಇನ್ನು ಉಳಿದವರಿಗಾಗಿ ಶೋಧ ನಡೆಯುತ್ತಿದೆ.
ಎ.27 ರಂದು ಕುಡುಪುವಿನ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸಮಯ ಓರ್ವ ಅಪರಿಚಿತ ವ್ಯಕ್ತಿ ಬಂದು ಮಾತಿನ ಚಕಮಕಿ ನಡೆಸಿದ್ದ ಎನ್ನಲಾಗಿದೆ. ಈ ವೇಳೆ ಕ್ರಿಕೆಟ್ ಆಡುತ್ತಿದ್ದ ತಂಡದವರು ಆತನಿಗೆ ಹಲ್ಲೆ ನಡೆ ರಸ್ತೆ ಬದಿ ಬಿಟ್ಟು ಹೋಗಿದ್ದು, ಆ ಬಳಿಕ ಈತ ಮೃತಪಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದರು. ಅಲ್ಲದೆ ಪ್ರಕರಣದ ಕುರಿತಂತೆ ವ್ಯಕ್ತಿಯೋರ್ವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್, ಸಿಬ್ಬಂದಿಗೆ ಮಾಹಿತಿ ಬಂದಿದ್ದರೂ ಘಟನೆಯ ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ಮೇಲಧಿಕಾರಿಗಳಿಗೆ ತಿಳಿಸದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿ ಈ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.