ಮಂಗಳೂರು: ಕುಡುಪುವಿನಲ್ಲಿ ನಡೆದ ಗುಂಪು ಹತ್ಯೆಯ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ ಆರೋಪಿಸಿದ್ದಾರೆ.
ಅವರು ಇಂದು ಸಂಜೆ 3.30 ಗಂಟೆಗೆ ಮಲ್ಲಿಕಟ್ಟೆಯ ಕಾಂಗ್ರೆಸ್ ಭವದಲ್ಲಿ ಪತ್ರಿಕಾಗೋಷ್ಠಿಗೋಷ್ಠಿಯನ್ನುದ್ದೇಶಿಸಿ ಮಾತಾಡಿ, ಪ್ರಕರಣದಲ್ಲಿ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದ್ದು, ಹಾಡಹಗಲೇ ಈ ರೀತಿಯ ಘಟನೆ ನಡೆದಿದ್ದಾರೂ ಪೊಲೀಸರು ಮಾಹಿತಿ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಕಮೀಷನರ್ ಇಂದು ಪತ್ರಿಕಾ ಗೋಷ್ಠಿಯಲ್ಲಿ ನೀಡಿರುವ ಮಾಹಿತಿ ಅಪೂರ್ಣವಾಗಿದ್ದು, ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ಈ ಪ್ರಕರಣದಲ್ಲಿ ಅಲ್ಲಿನ ಸ್ಥಳೀಯ ಮಾಜಿ ಕಾರ್ಪೊರೇಟರ್ ಪತಿಯ ಕೈವಾಡ ಇದ್ದು ಅವರನ್ನು ಬಚಾವ್ ಮಾಡಲು ಪೊಲೀಸರು ಯತ್ನಿಸಿದ್ದು, ಇದಕ್ಕಾಗಿ ಪೊಲೀಸರಿಗೆ ಸ್ಥಳೀಯ ಶಾಸಕರ ಒತ್ತಡ ಹೇರಿದ್ದಾಗಿ ಗಂಭೀರ ಆರೋಪ ಮಾಡಿದರು. ಅಲ್ಲದೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಲ್ಲಿಗೆ ಭೇಟಿ ಮಾಡಿ ಈ ಪ್ರಕರಣದ ಕುರಿತಂತೆ ಸಮಗ್ರ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶೇ.95 ಕಟ್ಟಡ ಕಾರ್ಮಿಕರಾಗಿ ವಲಸಿಗರಿದ್ದಾರೆ. ಅವರಿಂದಲೇ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ಅವರು ಇಲ್ಲಿಗೆ ದುಡಿಯಲು ಬರುತ್ತಾರೆ. ಹೀಗೆ ಆದರೆ ಮುಂದೆ ನಮಗೆ ಕಾರ್ಮಿಕರ ಅಭಾವ ಉಂಟಾಗಬಹುದು ಎಂದರು. ಕ್ರಿಕೆಟ್ ಆಟದಲ್ಲಿ ಧ್ವನಿ ವರ್ಧಕ ಬಳಸಲು ಪೊಲೀಸರು ಅನುಮತಿ ಕೊಡುತ್ತಾರೆ. ಕುಡುಪು ಸಾಮ್ರಾಟ್ ಮೈದಾನದಲ್ಲಿ ಕ್ರಿಕೆಟ್ ನಡೆದಿದ್ದು ಅದನ್ನು ಹಿಂದೂ ಮೈದಾನ ಎನ್ನುತ್ತಾರೆ. ಕ್ರಿಕೆಟ್ ಆಡಲು ಸಾಕಷ್ಟು ಟೀಂನವರು, ವೀಕ್ಷಕರು ಬರುತ್ತಾರೆ. ಆದರೆ ಕಮೀಷನರ್ ವಲಸೆ ಕಾರ್ಮಿಕನ ಮೇಲೆ ಸಚಿನ್ ಎಂಬಾತ ಹೊಡೆದಿದ್ದು, ಉಳಿದವರು ಸೇರಿದ್ದಾರೆ ಎಂದಿದ್ದಾರೆ. ಹಾಗಾದರೆ ಹಾಡಹಗಲೇ ಇಂಥಾ ಘಟನೆ ನಡೆದಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ನಲ್ವತ್ತೆಂಟು ಗಂಟೆ ಬೇಕಾಯ್ತಾ ಎಂದು ಪ್ರಶ್ನಿಸಿದ ಅವರು ಇದು ಪೊಲೀಸರ ವೈಫಲ್ಯ ಸಾಕ್ಷಿ ಎಂದು ಶಾಹುಲ್ ಹಮೀದ್ ಕೆ.ಕೆ ಹೇಳಿದರು.
ವ್ಯಕ್ತಿಯೋರ್ವನನ್ನು ಹೊಡೆದು ಕೊಂದಿದ್ದಾಗಿ ಸ್ಥಳೀಯವಾಗಿ ವ್ಯಾಪಕ ಚರ್ಚೆ ನಡೆದಿದೆ. ಹಾಗಾದರೆ ಗುಪ್ತಚರ ಇಲಾಖೆಗೆ ಯಾಕೆ ಮಾಹಿತಿ ಸಿಕ್ಕಿಲ್ಲ? ಆತನ ಮೇಲೆ ದೊಣ್ಣೆ, ಬ್ಯಾಟ್ನಿಂದ ಹೊಡೆದಿದ್ದಾಗಿ ವೈರಲ್ ಆಗಿದೆ. ಆದರೆ ನಾವು ಈ ಪ್ರಕರಣದ ಹಿಂದೆ ಬಿದ್ದ ಬಳಿಕವಷ್ಟೇ ಪ್ರಕರಣದ ತೀವ್ರತೆ ಹೆಚ್ಚಾಗಿ ಈ ಮಟ್ಟಕ್ಕೆ ಬಂದಿದೆ. ಆರಂಭದಲ್ಲಿ ಮೃತದೇಹದ ಮೇಲೆ ಮಾರಣಾಂತಿಕ ಗಾಯ ಇರ್ಲಿಲ್ಲ ಎಂದು ಮಾಹಿತಿ ನೀಡಿದ್ದರು. ಅದಕ್ಕಾಗಿ ನಾವು ಶವಾಗಾರಕ್ಕೆ ಹೋಗಬೇಕಾಯಿತು. ಪೋಸ್ಟ್ ಮಾರ್ಟಂ ಮುಂಚೆ ನಾವು ಮೃತದೇಹದ ಫೋಟೋ ತೆಗೆದಿದ್ದು, ತಲೆಯಿಂದ ಕಾಲಿನವರೆಗೂ ಗಾಯ ಕಂಡಿದೆ. ಕುತ್ತಿಗೆ ಗಾಯವಿತ್ತು, ಬೆನ್ನು, ಹೊಟ್ಟೆ, ಪ್ರಷ್ಟ ಏಟು ಬಿದ್ದಿದೆ. ಯುವಕ 35 ವಯಸ್ಸಿನವನಾಗಿದ್ದು ಗಟ್ಟಿಮುಟ್ಟಾಗಿರುವುದು ಕಂಡುಬಂದಿದೆ ಎಂದರು.
ಕಮಿಷರ್ ಲುಕ್ ಔಟ್ ಹೇಳಿಕೆ ಗೊಂದಲಕಾರಿಯಾಗಿದೆ. ಕ್ಷುಲಕ ಕಾರಣಕ್ಕೆ ಘಟನೆ ನಡೆದಿದ್ದರೆ ಆತ ಯಾವ ತಂಡದಲ್ಲಿ ಆಡಿದ್ದ? ಹೊರಗಿನಿಂದ ಬಂದಿದ್ದಾದರೂ ಯಾಕೆ? ಈ ಪ್ರಕರಣದಲ್ಲಿ ಬಿಜೆಪಿ ಮಾಜಿ ಕಾರ್ಪೊರೇಟರ್ ಪತಿ ಇದ್ದಾರ ಸುದ್ದಿ ಇದೆ. ದೇಶ ವಿರೋಧಿ ಘೋಷಣೆಯ ಲೇಬಲ್ ಅಂಟಿಸಿ, ಆತ ಮುಸಲ್ಮಾನ ಎಂದು ಆತನ ಮೇಲೆ ಈ ಕೃತ್ಯ ಎಸಗಲಾಗಿದೆ ಎಂದು ಶಾಹುಲ್ ಹಮೀದ್ ಕೆ.ಕೆ ಆರೋಪಿಸಿದರು.
ಕೃತ್ಯದ ಬಗ್ಗೆ ಸರಿಯಾಗಿ ತನಿಖೆ ನಡೆಸದ ಸ್ಥಳೀಯ ಪೊಲೀಸರನ್ನು ಸಸ್ಪೆಂಡ್, ಪ್ರಕರಣದಲ್ಲಿ ಶಾಮೀಲಾದ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಪಹಲ್ಗಾ ದುರಂತದ ನಡುವೆ ಪ್ರಚೋದಿತರಾಗಿ ಈ ಘಟನೆ ನಡೆದಿದೆ. ಚಕ್ರವರ್ತಿ ಸೂಲೆಬೆಲೆಯಂತವರ ಮಾತು ಕೇಳಿ ಈ ಘಟನೆ ನಡೆದಿದೆ. ಈ ಮೊದಲು ಪುರುಷರ ಕಟ್ಟು ಆಚರಣೆಯ ನೆಪದಲ್ಲಿ ಮುಸ್ಲಿಮರ, ಪ್ರವಾದಿ, ಬಾಂಗ್ ವಿಚಾರವಾಗಿ ಅವಮಾನ ಮಾಡಲಾಗಿದ್ದು, ಅವರನ್ನೂ ಬಂಧಿಸಲಾಗಿಲ್ಲ ಎಂದು ಶಾಹುಲ್ ಹಮೀದ್ ಕೆ.ಕೆ ಆರೋಪಿಸಿದರು.
ಮೈದಾನದಲ್ಲಿ ಘಟನೆ ನಡೆದಿದ್ದರೆ ಅವರ ಶವ ರಸ್ತೆ ಬದಿಗೆ ಹೇಗೆ ಬಂದಿತು? ಶವದಲ್ಲಿ ಒಳ ಉಡುಪು, ಪರ್ಸ್ ಇರಲಿಲ್ಲ ಬದಲಿಗೆ ಒಂದು ಜೀನ್ಸ್ ಪ್ಯಾಂಟ್ ಮಾತ್ರ ಇತ್ತು. ನೂರಾರು ಸಾಕ್ಷಿಗಳು ಕಣ್ಣೆದುರೇ ಇದ್ದು ತಪ್ಪಿತಸ್ಥರನ್ನು ಬಚಾವ್ ಮಾಡುವ ಯತ್ನ ನಡೆದಿದೆ. ಇದೀಗ ಮೃತಪಟ್ಟವನು ಯಾರೆಂದೂ ಪತ್ತೆಯಾಗಿಲ್ಲ. ದುಡಿಯಲು ಬಂದು ಈ ರೀತಿ ಆದರೆ ಅವನ ಹೆಂಡತಿ ಮಕ್ಕಳ ಗತಿ ಏನು? ನಾಳೆ ಅವರಿಗೆ ವಿಷಯ ಗೊತ್ತಾದಾಗ ಆಗುವ ಆಘಾತ ಎಷ್ಟು ಎಂದು ಅವರಿಗೆ ಅರಿವಿದೆಯಾ ಎಂದು ಪ್ರಶ್ನಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ಅಲ್ವಿನ್ ಪ್ರಕಾಶ್, ಸುಹೈಲ್ ಕಂದಕ್, ಹಬೀಬ್ ಉಲ್ಲಾ ಕಣ್ಣೂರು, ವವಾಬ್ ಕುದ್ರೋಳಿ, ಲಾರೆನ್ಸ್ ಡಿಸೋಜಾ, ಬಶೀರ್ ಇದ್ದರು.