ಮಂಗಳೂರು: ರವಿವಾರ ಕುಡುಪು ಸಮೀಪ ಗುಂಪು ಹಲ್ಲೆಗೊಳಗಾಗಿ ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿದ್ದು, ವ್ಯಕ್ತಿ ಕೇರಳದ ವಯನಾಡು ಪುಳುಪಳ್ಳಿ ನಿವಾಸಿ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.
ಮಾಹಿತಿ ಅರಿತ ಕೂಡಲೇ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ವಯನಾಡು ಶಾಸಕ ಅಡ್ವಕೇಟ್ ಟಿ. ಸಿದ್ದೀಕ್ ಅವರನ್ನು ಸಂಪರ್ಕಿಸಿದ್ದು, ತಕ್ಷಣವೇ ರಾತ್ರಿ ಹೊತ್ತಿನಲ್ಲಿ ಮೃತನ ಸಹೋದರ ಅಬ್ದುಲ್ ಜಬ್ಬಾರ್ ಹಾಗೂ ಕುಟುಂಬಸ್ಥರು ಮಂಗಳೂರಿಗೆ ತಲುಪಿ ಮೃತ ದೇಹದ ಗುರುತು ಪತ್ತೆ ಹಚ್ಚಿದ್ದಾರೆ.
ಬಳಿಕ ಮೃತದೇಹವನ್ನು ಮಂಗಳೂರು ಬಂದರಿನ ಜೀನತ್ ಬಕ್ಷ್ ಜುಮಾ ಮಸೀದಿಯಲ್ಲಿ ಸ್ನಾನ ಮಾಡಿಸಿ, ಮಯ್ಯತ್ತ್ ನಮಾಜಿನ ವಿಧಿ ವಿಧಾನಗಳ ಪೂರ್ತಿಗೊಳಿಸಿ ನಂತರ ಬುಧವಾರ ಮುಂಜಾನೆ 5 ಗಂಟೆಗೆ ಪೊಲೀಸ್ ಜೀಪಿನ ಬೆಂಗಾಲಿನೊಂದಿಗೆ ಕೇರಳಕ್ಕೆ ಕೊಂಡೊಯ್ಯಲಾಯಿತು.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 20 ಮಂದಿಯನ್ನು ಬಂಧಿಸಲಾಗಿದ್ದು ಇನ್ನುಳಿದವರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.