ಮಸೀದಿಯ ಸುಂದರ ಮರದ ಕೆತ್ತನೆಯ ಹಿಂದೆ ಹಿಂದೂ ಶಿಲ್ಪಿಗಳ ಕೈಚಳಕ! ಕೋಮು ಸಾಮರಸ್ಯ ಸಾರುವ ಐತಿಹಾಸಿಕ ಕುಪ್ಪೆಪದವು ಮಸೀದಿ!

ಬಜ್ಪೆ: ಸುಮಾರು 72 ವರ್ಷಗಳ ಇತಿಹಾಸ ಹೊಂದಿರುವ ಕುಪ್ಪೆಪದವಿನ ಐತಿಹಾಸಿಕ ಮಸೀದಿ ನವೀಕೃತಗೊಂಡಿದ್ದು ಇದರ ಉದ್ಘಾಟನೆಯು ಮೇ 15ರಂದು ನಡೆಯಲಿದ್ದು, ಮೇ 17ರವರೆಗೆ ವಿವಿಧ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ. ವಿಶೇಷವೆಂದರೆ ಈ ಮಸೀದಿ ನಿರ್ಮಾಣದಲ್ಲಿ ಹಿಂದೂ ಶಿಲ್ಪಿಗಳು ಕೈ ಜೋಡಿಸಿದ್ದಾರೆ ಆದುದರಿಂದ ಇದೊಂದು ಕೋಮು ಸಾಮರಸ್ಯ ಸಾರುವ ಐತಿಹಾಸಿ ಮಸೀದಿ ಎನ್ನುವ ಪ್ರತೀತಿಗೆ ಪಾತ್ರವಾಗಿದೆ.

ಈ ಮಸೀದಿ 5-1-1958ನೇ ವರ್ಷದಲ್ಲಿ ಸ್ಥಾಪನೆಗೊಂಡಿದ್ದಾಗಿ ಮಾಹಿತಿ ಲಭಿಸಿದೆ. ಈ ಐತಿಹಾಸಿಕ ಮಸೀದಿಯು 72 ವರ್ಷಗಳ ಬಳಿಕ ನವೀಕೃತಗೊಂಡಿದ್ದು, ಅದರ ಉದ್ಘಾಟನೆಯು ಮೇ 15, 16, 17ರಂದು ನಡೆಯಲಿದೆ. ಈ ನವೀಕೃತ ಮಸೀದಿಗೆ ಸರಿಸುಮಾರು 80 ಲಕ್ಷ ರೂ. ಮೌಲ್ಯದ ಸಾಗುವಾನಿ ಮರ ಬಳಸಲಾಗಿದೆ. ಸುಮಾರು ರೂ. 40 ಲಕ್ಷದಷ್ಟು ಹಣ ಖರ್ಚು ಮಾಡಿ ಬರೋಬ್ಬರಿ 1.20 ಕೋಟಿ ರೂ. ವೆಚ್ಚದಲ್ಲಿ ಮಸೀದಿಯನ್ನು ಮರು ನಿರ್ಮಾಣ ಮಾಡಲಾಗಿದೆ.

ಮಸೀದಿ ನಿರ್ಮಾಣದಲ್ಲಿ ಹಿಂದೂ ಶಿಲ್ಪಿಗಳು

 

ಈ ಮಸೀದಿಯ ನಿರ್ಮಾಣದಲ್ಲಿ ಹಿಂದೂ ಶಿಲ್ಪಿಗಳು ಕೈ ಜೋಡಿಸಿದ್ದಾಗಿ ಮಸೀದಿ ಅಧ್ಯಕ್ಷ ಮುಹಮ್ಮದ್ ಷರೀಫ್ ಕಜೆ ಸ್ವತಃ ಮಾಹಿತಿ ನೀಡಿದ್ದಾರೆ.

ಇಂಜಿನಿಯರ್‌ ಪ್ರಣೀತ್‌ ರೈ ಎಂಬವರು ಮಸೀದಿಗೆ ನೀಲನಕ್ಷೆ ತಯಾರಿಸಿದ್ದು, ಕೆತ್ತನೆ ಕೆಲಸವನ್ನು ಪ್ರಸಿದ್ಧ ವಾಸ್ತು ಶಿಲ್ಪಿ ಕೊಂಕಣಿ ಸಮುದಾಯದ ರಾಜ ಎಂಬವರು ಜವಾಬ್ದಾರಿ ವಹಿಸಿಕೊಂಡಿದ್ದರು. ಇವರು ಶಿವಮೊಗ್ಗ ಜಿಲ್ಲೆಯ ಸಾಗರದವರಾಗಿದ್ದು, ಇವರ ಸಹಾಯಕರಾಗಿ ರವಿ ಎಂಬವರು ಕೆಲಸ ಮಾಡಿದ್ದಾರೆ. ಇವರು ಬಿಲ್ಲವ ಸಮುದಾಯದವರಾಗಿದ್ದಾರೆ. ಇನ್ನು ಕೊಂಕಣಿ ಸಮುದಾಯದ ಮರದ ಶಿಲ್ಪಿಗಳೂ ಇವರೊಂದಿಗೆ ಕೆಲಸ ಮಾಡಿದ್ದಾರೆ ಎಂದು ಮಸೀದಿಯವರು ಮಾಹಿತಿ ನೀಡಿದ್ದಾರೆ. ಕುಪ್ಪೆಪದವು ಐತಿಹಾಸಿಕ ಮಸೀದಿಗೆ ಈ ಹಿಂದಿನಿಂದಲೂ ಹಿಂದೂ ಧರ್ಮದವರು ಹರಕೆ ಸಲ್ಲಿಸಿಕೊಂಡು ಬರುತ್ತಿದ್ದರು ಎಂಬ ಮಾತುಗಳು ಕೇಳಿಬಂದಿದೆ. ಮಸೀದಿಗೆ ಮರಮುಟ್ಟುಗಳನ್ನು ಹಿಂದೂ ಹಾಗೂ ಕ್ರೈಸ್ತ ಸಮುದಾಯದವರು ಉಚಿತವಾಗಿ ಒದಗಿಸಿರುವುದು ಗಮನಾರ್ಹ ವಿಚಾರವಾಗಿದೆ.

ಮಸೀದಿ ಮುಂದೆ ಅತ್ತಿದ್ದ ಹಿಂದೂ ವ್ಯಕ್ತಿ!

ಕೆಲವು ವರ್ಷಗಳ ಹಿಂದೆ ಕುಪ್ಪೆಪದವು ಬಳಿ ಮುಸ್ಲಿಂ ವ್ಯಕ್ತಿಯೊಬ್ಬ ಸ್ಥಳೀಯ ಹಿಂದೂ ವ್ಯಕ್ತಿಯ ಮೇಲೆ ಹಲ್ಲೆಗೈದಿದ್ದ. ಈ ವೇಳೆ ಹಿಂದೂ ವ್ಯಕ್ತಿಯು ಮಸೀದಿಯ ಮುಂಭಾಗದಲ್ಲಿ ನಿಂತು, ದೇವನಿಗೆ ಶಕ್ತಿ ಇದ್ರೆ ಆತನಿಗೆ ಖಂಡಿತಾ ಶಿಕ್ಷೆ ಆಗುತ್ತದೆ ಎಂದು ಅತ್ತಿದ್ದ. ಅದರ ಮರು ದಿವಸ ಸಂಜೆಯೇ ನಮಾಜಿನ ಸಂದರ್ಭದಲ್ಲಿ ಆರೋಪಿ ಮುಸ್ಲಿಂ ವ್ಯಕ್ತಿಯ ರಿಕ್ಷಾಕ್ಕೆ ಇಲ್ಲಿಯೇ ಸಮೀಪ ಲಾರಿ ಅಪಘಾತವಾಗಿತ್ತು ಎನ್ನುವುನ್ನು ಸ್ಥಳೀಯ ಮುಸ್ಲಿಮರು ಸ್ಮರಿಸಿಕೊಂಡಿದ್ದು, ಈ ಮಸೀದಿ ಶಕ್ತಿಯುತ ತಾಣವಾಗಿ ಗುರುತಿಸಿಕೊಂಡಿದೆ. ಎಲ್ಲಾ ಸಮುದಾಯದವರ ಸಂಕಷ್ಟಗಳನ್ನು ನಿವಾರಿಸುವ ಶಕ್ತಿಯನ್ನು ಮಸೀದಿಯ ದೇವ ಮಾಡಡುತ್ತಿದ್ದಾನೆ ಎಂದು ಮಸೀದಿಯರು ಮಾಹಿತಿ ನೀಡಿದ್ದಾರೆ.

ಆಮಂತ್ರಣ ಪತ್ರಿಕೆ ಬಿಡುಗಡೆ

ಇಂದು ಮಸೀದಿಯ ವಠಾರದಲ್ಲಿ ಮಸೀದಿ ಉದ್ಘಾಟನೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ, ದಯಾನಂದ ಶೆಟ್ಟಿ, ಮಸೀದಿ ಧರ್ಮಗುರು ಅಬ್ದುಲ್ ಸಲಾಂ ಮದನಿ, ಹಮ್ಮಬ್ಬ, ಮುಸ್ತಫಾ, ಅಬೂಬಕರ್ ಕಲ್ಲಾಡಿ, ರಝಕ್ ಪದವಿನಂಗಡಿ ಮತ್ತಿತರರು ಉಪಸ್ಥಿತರಿದ್ದರು.

ಮಸೀದಿ ಉದ್ಘಾಟನೆಯ ಸಂದರ್ಭ ದಿಗ್ಗಜರ ಸಮಾಗಮ ನಡೆಯಲಿದೆ. ಸಚಿವ ಝಮೀರ್ ಅಹ್ಮದ್ ಖಾನ್, ಸ್ಪೀಕರ್ ಯು.ಟಿ.ಖಾದರ್, ಕೆ.ಮುಹಮ್ಮದ್ ಷರೀಫ್ ಕಜೆ, ಸುಲ್ತಾನುಲ್ ಉಲಮಾ ಎ.ಪಿ. ಅಬುಬಕರ್ ಮುಸ್ಲಿಯಾರ್ ಕಾಂತಪುರಂ, ಬದ್ರುಸ್ಸಾದಾತ್ಇಬ್ರಾಹಿಂ ಖಲೀಲುಲ್ ಬುಖಾರಿ ತಂಞಲ್, ಅಬ್ದುಲ್ ಸಲಾಂ ಮದನಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಸೀದಿ ಅಧ್ಯಕ್ಷ ಮುಹಮ್ಮದ್ ಷರೀಫ್ ಕಜೆ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

ಸ್ವಾಗತ ಸಮಿತಿ ಪ್ರಮುಖರಾದ ಇನಾಯತ್ ಅಲಿ ಮಾತನಾಡಿ, ʻಕುಪ್ಪೆಪದವಿನಲ್ಲಿ ನವೀಕರಣಗೊಂಡು ಕಂಗೊಳಿಸುತ್ತಿರುವ ಸುಂದರ ಮಸೀದಿಯನ್ನು ವೀಕ್ಷಿಸಲು ಸರ್ವಧರ್ಮದ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಜಾತಿ ಧರ್ಮ ಪಕ್ಷಗಳ ಬೇಧವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕಾರ ನೀಡಬೇಕಿದೆ. ಮೇ 17ರ ಶನಿವಾರ ಸಂಜೆ 6ಕ್ಕೆ ಸೌಹಾರ್ದ ಸಂಗಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಆಹ್ವಾನಿತ ತಂಡಗಳ ದಫ್ ಪ್ರದರ್ಶನ ಹಾಗೂ ಧಾರ್ಮಿಕ ಮತ ಪ್ರವಚನ ನಡೆಯಲಿದೆʼ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಗಿರೀಶ್ ಆಳ್ವ, ದಯಾನಂದ ಶೆಟ್ಟಿ, ಮಸೀದಿ ಧರ್ಮಗುರು ಅಬ್ದುಲ್ ಸಲಾಂ ಮದನಿ, ಹಮ್ಮಬ್ಬ, ಮುಸ್ತಫಾ, ಅಬೂಬಕರ್ ಕಲ್ಲಾಡಿ, ರಝಕ್ ಪದವಿನಂಗಡಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!