ಕಾಂಗ್ರೆಸ್‌ ಇದ್ದಾಗ ಲೀಟರ್‌ ಪೆಟ್ರೋಲ್‌ 60 ರೂ.ಗೆ ಸಿಗುತ್ತಿತ್ತು: ಇನಾಯತ್‌ ಅಲಿ

ಮಂಗಳೂರು: ಸತ್ಯವನ್ನು ಸುಳ್ಳಾಗಿಸುವ, ಸುಳ್ಳನ್ನು ಸತ್ಯವಾಗಿಸುವ ಪ್ರಚಾರ ಕಾರ್ಯ ವೇಗವಾಗಿ ನಡೆಯುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2014ರ ಹಿಂದೆ ಕಚ್ಚಾತೈಲ ಬ್ಯಾರಲ್‌ಗೆ 141 ಡಾಲರ್ ಇದ್ದ ಸಮಯದಲ್ಲಿ 60 ರೂ. ಗೆ ಪೆಟ್ರೋಲ್ ಸಿಗುತ್ತಿತ್ತು. ಆದರೆ ಇದೀಗ ಕಚ್ಚಾತೈಲ ಬೆಲೆ 64 ಡಾಲರ್‌ಗೆ ಇಳಿದಿದ್ದರೂ ಅಡುಗೆ ಅನಿಲ ದರವನ್ನು 50 ರೂ. ಗಳಿಗೆ ಏರಿಕೆ ಮಾಡಿರುವುದು ಕೇಂದ್ರದ ಬಿಎಪಿ ಸಾಧನೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ದಿನನಿತ್ಯ ಉಪಯೋಗಿಸುವ ಆಹಾರ ಸಾಮಗ್ರಿಗಳ ಬೆಲೆಯೂ ಏರಿಕೆಯಾಗಿದೆ. ಆದರೆ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವ ಬಿಜೆಪಿಯವರಿಗೆ ನಾಚಿಯಾಗಿಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ ಅವರು ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನಾ ಸಮಾವೇಶದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಅಡುಗೆ ಅನಿಲ (ಗ್ಯಾಸ್) ಸಿಲಿಂಡರ್ ಬೆಲೆಯನ್ನು 50 ರೂ.ಗಳಿಗೆ ಏರಿಕೆ ಮಾಡಿರುವುದು ಸೇರಿದಂತೆ ಕೇಂದ್ರದ ಬೆಲೆ ಏರಿಕೆ ವಿರುದ್ಧ ಸೋಮವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿಗೆ, ಖಾಲಿ ಗ್ಯಾಸ್‌ ಸಿಲಿಂಡರ್‌ ಹಿಡಿದು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಇದಕ್ಕಿಂತ ಮುಂಚೆ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ನಡೆದ ಮೆರವಣಿಗೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ, ಭಿತ್ತಿ ಪತ್ರ ಪ್ರದರ್ಶಿಸುತ್ತಾ ಮೆರವಣಿಗೆ ನಡೆಸಿದರು.

ಕಟ್ಟಿಗೆ, ಖಾಲಿ ಗ್ಯಾಸ್ ಸಿಲಿಂಡರ್ ಹಿಡಿದು ಮೆರವಣಿಗೆ : ಬೆಲೆ ಏರಿಕೆ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ನಮ್ಮ ದೇಶದ ಬಹುದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ ಮತ್ತು ಬೆಲೆ ಏರಿಕೆ. ಸಜೀವ ಸರಕಾರ ಈ ಬಗ್ಗೆ ಗಂಭೀರವಾಗಿ ಪ್ರಯತ್ನಿಸಬೇಕಿತ್ತು. ಆದರೆ ಪ್ರಧಾನಿ ಮೋದಿಯವರಿಗೆ ಹಿಂದೆ ಯುಪಿಎ ಸರಕಾರದ ವಿರುದ್ಧ ಮಾಡಿದ್ದ ಭಾಷಣದ ಮಾತುಗಳನ್ನು ಈಗ ನೆನಪಿಸಬೇಕಿದೆ. ರಾಜ್ಯ ಸರಕಾರದ ವಿರುದ್ಧ ಬಿಜೆಪಿಯ ಜನಾಕ್ರೋಶದ ವೇಳೆ ಅಧ್ಯಕ್ಷ ವಿಜಯೇಂದ್ರ ಅವರಿಗೆ ಸ್ವಂತ ಬುದ್ದಿ ಇದ್ದ ಹಾಗಿಲ್ಲ. ಅಂತರರಾಷ್ಟ್ರೀಯವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಏರಿಕೆಯಾಗಿದೆ ಎನ್ನುತ್ತಾರೆ. ರಾಹುಲ್ ಗಾಂಧಿ ಇದ್ದಿದ್ದರೆ ಇನ್ನೂ ಹೆಚ್ಚಾಗುತ್ತಿತ್ತು ಎಂಬ ಬಾಲಿಶ ಹೇಳಿಕೆ ನೀಡುತ್ತಾರೆ. ಆದರೆ ಕಾಂಗ್ರೆಸ್ ಜಮೀನುದಾರರು, ಬಂಡವಾಳ ಶಾಹಿಗಳಿಗೆ ತೊಂದರೆ ನೀಡಿದೆಯೇ ಹೊರತು ಯಾವತ್ತೂ ಬಡ ಜನರಿಗೆ ಅನ್ಯಾಯ ಮಾಡಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕೇಂದ್ರದಲ್ಲಿ ಕಳೆದ 11 ವರ್ಷಗಳಿಂದ ಎನ್‌ಡಿಎ ಸರಕಾರವಿದೆ. ಅದಕ್ಕೆ ಹಿಂದಿದ್ದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್‌ಗೆ 141 ಡಾಲರ್ ಇದ್ದ ಸಂದರ್ಭದಲ್ಲಿಯೂ ಪೆಟ್ರೋಲ್ ಬೆಲೆ 60 ರೂ. ನಲ್ಲಿ ಸಿಗುತ್ತಿತ್ತು. ಗ್ಯಾಸ್ ದರ 480 ರೂ. ಗಳಾಗಿತ್ತು. ಆದರೆ ಇದೀಗ ಕಚ್ಚಾತೈಲ ಬೆಲೆ 64 ಡಾಲರ್‌ಗೆ ಇಳಿಕೆಯಾಗಿದ್ದರೂ ಪೆಟ್ರೋಲ್ ಬೆಲೆ, ಡೀಸೆಲ್ ಬೆಲೆ ಇಳಿಕೆಯಾಗಿಲ್ಲ. ಬದಲಾಗಿ ಈಗಾಗಲೇ ಹಲವು ಬಾರಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯನ್ನೂ ಇತ್ತೀಚೆಗೆ 50 ರೂ. ಗಳಿಗೆ ಏರಿಕೆ ಮಾಡಿದೆ. ಕರ್ನಾಟಕ ಸರಕಾರ 2 ರೂ. ದರ ಹೆಚ್ಚಿಸಿದರೆ ಜನಾಕ್ರೋಶ ವ್ಯಕ್ತಪಡಿಸುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ ಮುಖಂಡರಾದ ಎಂ.ಎಸ್.ಮುಹಮ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಮಾತನಾಡಿ, ಮಮತಾ ಗಟ್ಟಿ, ಸದಾಶಿವ ಉಳ್ಳಾಲ್ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ವಂದಿಸಿದರು.

error: Content is protected !!