ಪಹಲ್ಗಾಂ ಪಾಪಕೃತ್ಯದಲ್ಲಿ ಚೀನಾ ಶಾಮೀಲು: ಎನ್‌ಐಎ ಸಿಕ್ಕ ಸಾಕ್ಷಿ ಏನು?

ನವದೆಹಲಿ: ಪಹಲ್ಗಾಮ್ ಬಳಿ ದಾಳಿ ನಡೆದ ಪ್ರದೇಶದಲ್ಲಿ, ಅದೇ ಸಮಯದಲ್ಲಿ ಹುವಾವೇ ಉಪಗ್ರಹ ಫೋನೊಂದು ಸಕ್ರಿಯವಾಗಿದ್ದ ವಿಚಾರ ರಾಷ್ಟ್ರೀಯ ತನಿಖೆ ದಳದ (NIA) ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದ್ದು, ನರಮೇಧದಂತಹಾ ಪಾಪ ಕೃತ್ಯದಲ್ಲಿ ಚೀನಾವೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

huawei satellite phone 1

ಯಾಕೆಂದರೆ ಭಾರತದಲ್ಲಿ ಚೀನಾ ನಿರ್ಮಿತ ಹುವಾವೇ ಕಂಪೆನಿಯ ಸಾಧನ ಬಳಕೆಗೆ ನಿರ್ಬಂಧ ಇದೆ. ಹೀಗಿದ್ದರೂ ದಾಳಿ ನಡೆದ ಪ್ರದೇಶದಲ್ಲಿ ಏಕೈಕ ಹುವಾವೇ ಸ್ಯಾಟಲೈಟ್‌ ಫೋನ್‌ ಸಕ್ರಿಯವಾಗಿತ್ತು ಎಂಬ ವಿಚಾರ ಎನ್‌ಐಎ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ. ಹುವಾವೇ ಉಪಗ್ರಹ ಫೋನ್‌ಗಳನ್ನು ಪಾಕಿಸ್ತಾನ ಅಥವಾ ವಿದೇಶದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಿರುವ ಸಾಧ್ಯತೆ ಇದೆ. ಈಗ ಈ ಫೋನಿನ ಮೂಲದ ಬಗ್ಗೆ ಎನ್‌ಐಎ ತನಿಖೆಗೆ ಇಳಿದಿದಿದ್ದು ವಿದೇಶಿ ಸಂಸ್ಥೆಗಳಿಂದ ಸಹಾಯ ಪಡೆಯಲು ಮುಂದಾಗಿದೆ.

ಹುವಾವೇ ಕಂಪನಿ ಉಪಗ್ರಹ ಸಂವಹನ ವೈಶಿಷ್ಟ್ಯ ಹೊಂದಿರುವ ಹಲವಾರು ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದೆ. ಹುವಾವೇ ಮೇಟ್ 60 ಪ್ರೊ, ಪಿ60 ಸರಣಿ ಮತ್ತು ನೋವಾ 11 ಅಲ್ಟ್ರಾ ಸ್ಯಾಟಲೈಟ್‌ ಫೋನ್‌ಗಳಾಗಿವೆ. ಈ ಸಾಧನಗಳನ್ನು ಚೀನಾ ಟೆಲಿಕಾಂ ನಿರ್ವಹಿಸುವ ಚೀನಾದ ಟಿಯಾಂಟಾಂಗ್ -1 ಉಪಗ್ರಹ ನೆಟ್‌ವರ್ಕ್‌ಗೆ ಸಂಪರ್ಕಿಸುವಂತೆ ವಿನ್ಯಾಸಗೊಳಿಸಲಾಗಿದೆ.


ಈ ಫೋನ್‌ಗಳು ಉಪಗ್ರಹ ಆಂಟೆನಾ ಮತ್ತು ವಿಶೇಷ ಚಿಪ್‌ಗಳನ್ನು ಒಳಗೊಂಡಿರುತ್ತವೆ. ಇದು ಬಾಹ್ಯ ಉಪಕರಣಗಳಿಲ್ಲದೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ. ಸೇವೆಗಳಿಗೆ ಚೀನಾ ಟೆಲಿಕಾಂ ಕಂಪನಿಯ ಸಿಮ್ ಕಾರ್ಡ್‌ಗಳು ಮತ್ತು ಚಂದಾದಾರಿಕೆ ಯೋಜನೆಗಳು ಬೇಕಾಗುತ್ತವೆ. ತುರ್ತು ಬಳಕೆಗಾಗಿ ವಿನ್ಯಾಸಗೊಳಿಸಲಾದ ಈ ಫೋನ್‌ಗಳು ಕಡಿಮೆ-ಬ್ಯಾಂಡ್‌ವಿಡ್ತ್ ಧ್ವನಿ, ಪಠ್ಯ ಸೇವೆ, ಇಂಟರ್‌ನೆಟ್‌ ಸೇವೆಗಳನ್ನು ನೀಡುತ್ತವೆ. ಸೆಲ್ಯುಲಾರ್ ವ್ಯಾಪ್ತಿ ಇಲ್ಲದ ಪ್ರದೇಶಗಳಲ್ಲಿಯೂ ಸಹ ಕಾರ್ಯನಿರ್ವಹಿಸುತ್ತವೆ.

ಹಿಂದೆ ಉಗ್ರಗಾಮಿಗಳು ತುರಾಯ ಸ್ಯಾಟಲೈಟ್‌ ಫೋನ್‌ಗಳನ್ನು ಬಳಸುತ್ತಿದ್ದರು. ಈ ಫೋನ್‌ಗಳಲ್ಲಿ ಅಂಟೆನಾ ಇರುವ ಕಾರಣ ಸುಲಭವಾಗಿ ಗುರುತಿಸಬಹುದಾಗಿತ್ತು. ಆದರೆ ಹುವಾವೇ ಸ್ಯಾಟಲೈಟ್‌ ಫೋನ್‌ಗಳು ಸ್ಮಾರ್ಟ್‌ಫೋನ್‌ಗಳಂತೆ ವಿನ್ಯಾಸ ಮಾಡಲಾಗಿರುವ ಕಾರಣ ಅಷ್ಟು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಒಬ್ಬಾತ ಫೋನ್‌ ಕರೆಯಲ್ಲಿ ಸಕ್ರಿಯವಾಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.

ವಿದೇಶಿ ಸ್ಯಾಟಲೈಟ್‌ ಫೋನ್‌ಗಳಿಗೆ ನಿರ್ಬಂಧ
2008ರ ಮುಂಬೈ ದಾಳಿ ಸಂದರ್ಭದಲ್ಲಿ ಉಗ್ರರು ಸ್ಯಾಟಲೈಟ್‌ ಫೋನ್‌ ಬಳಸಿ ಕೃತ್ಯ ಎಸಗಿದ್ದರು. ಪಾಕಿಸ್ತಾನದ ಹ್ಯಾಂಡ್ಲರ್‌ಗಳ ಜೊತೆ ಸ್ಯಾಟಲೈಟ್‌ ಫೋನ್‌ ಮೂಲಕ ಸಂಪರ್ಕದಲ್ಲಿದ್ದರು. ಈ ಪ್ರಕರಣದ ಬಳಿಕ ಭಾರತದಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆಗೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ರಕ್ಷಣಾ ಸಾಮಾಗ್ರಿ ಹೊತ್ತುಕೊಂಡು ಬಂದ ಟರ್ಕಿ ವಿಮಾನ ಪಾಕ್‌ನಲ್ಲಿ ಲ್ಯಾಂಡ್‌

ಭಾರತದ ವೈರ್‌ಲೆಸ್ ಆಕ್ಟ್‌ನ ಸೆಕ್ಷನ್ 6 ಮತ್ತು ಇಂಡಿಯನ್ ಟೆಲಿಗ್ರಾಫ್ ಆಕ್ಟ್‌ನ ಸೆಕ್ಷನ್ 20 ರ ಅಡಿಯಲ್ಲಿ ಭಾರತದಲ್ಲಿ ತುರಾಯಾ/ಇರಿಡಿಯಮ್ ಸ್ಯಾಟಲೈಟ್ ಫೋನ್‌ಗಳ ಬಳಕೆ ಕಾನೂನುಬಾಹಿರವಾಗಿದೆ. ಭಾರತಕ್ಕೆ ಪ್ರಯಾಣಿಸುವ ಎಲ್ಲಾ ವ್ಯಕ್ತಿಗಳಿಗೆ ಥುರಾಯ/ಇರಿಡಿಯಮ್ ಸ್ಯಾಟಲೈಟ್ ಫೋನ್‌ಗಳ ಬಳಕೆಯನ್ನು ಭಾರತದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಸಲಹೆ ನೀಡಲಾಗುತ್ತದೆ. ಭಾರತದಲ್ಲಿ ಬಿಎಸ್‌ಎನ್‌ಎಲ್‌ ಕಂಪನಿ ಉಪಗ್ರಹ ಫೋನ್‌ ಸೇವೆ ನೀಡುತ್ತಿದೆ. ಸೇವೆಯು ಭಾರತದ ಸಂಪೂರ್ಣ ಭೌಗೋಳಿಕ ಪ್ರದೇಶಕ್ಕೆ ನೀಡುತ್ತದೆ

error: Content is protected !!