ಪಹಲ್ಗಾಂ ಪ್ರತೀಕಾರಕ್ಕೆ ಆರ್‌ಎಸ್‌ಎಸ್‌ ಕರೆ

ನವದೆಹಲಿ: ಪಹಲ್ಗಾಂ ದುರಂತದ ಪ್ರತೀಕಾರದ ಬಗ್ಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅಬ್ಬರಿಸಿದ ಬೆನ್ನಲ್ಲೇ ಆರ್‌ಎಸ್‌ಎಸ್‌ ಕೂಡ ಗುಡುಗಿದ್ದು, ‘ ಭಾರತ ಪ್ರತೀಕಾರವನ್ನು ತೀರಿಸಿಕೊಳ್ಳಬೇಕು. ದುಷ್ಟತನವನ್ನು ನಾಶ ಮಾಡಲು ಶಕ್ತಿ ತೋರಬೇಕು’ ಎಂದು ಕರೆ ನೀಡಿದೆ.

ಮುಂಬೈ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ವೇಳೆ ಪಹಲ್ಗಾಂ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವರ್‌, ‘ಜನರ ಧರ್ಮದ ಬಗ್ಗೆ ಕೇಳಿದ ಬಳಿಕ ಅವರನ್ನು ಸಾಯಿಸಿದ್ದಾರೆ. ಹಿಂದೂಗಳು ಎಂದಿಗೂ ಅಂತಹ ಕೃತ್ಯ ಮಾಡುವುದಿಲ್ಲ. ಇದು ಮತ್ತು ಅಧರ್ಮದ ವಿರುದ್ಧದ ಯುದ್ಧ. ನಮ್ಮ ಹೃದಯದಲ್ಲಿ ನೋವಿದೆ. ಕೋಪಗೊಂಡಿದ್ದೇವೆ. ಆದರೆ ದುಷ್ಟತನವನ್ನು ನಾಶ ಮಾಡಲು ಶಕ್ತಿಯನ್ನು ತೋರಿಸಬೇಕು’ ಎಂದರು.

ಇದೇ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಕರೆ ನೀಡಿದ ಅವರು, ‘ನಾವು ಒಗ್ಗಟ್ಟಾಗಿದ್ದರೆ ಯಾರು ನಮ್ಮನ್ನು ಕೆಟ್ಟ ಉದ್ದೇಶದಿಂದ ನೋಡಲು ಧೈರ್ಯ ಮಾಡುವುದಿಲ್ಲ. ದ್ವೇಷ ಮತ್ತು ಹಗೆತನ ನಮ್ಮ ಗುಣವಲ್ಲ. ಆದರೆ ಮೌನವಾಗಿ ಹಾನಿಯನ್ನು ಸಹಿಸಿಕೊಳ್ಳುವುದಲ್ಲ. ಶಕ್ತಿ ಇಲ್ಲಿದ್ದರೆ ಬೇರೆ ಆಯ್ಕೆಯಿಲ್ಲ ಆದರೆ ಸಾಮರ್ಥ್ಯವಿದ್ದಾಗ ಅಗತ್ಯವಿದ್ದ ಸಂದರ್ಭದಲ್ಲಿ ಅದು ಗೋಚರಿಸಬೇಕು’ ಎಂದು ಹೇಳಿದರು.

ಭಾರತದ ಮುಕುಟದಂತಿರುವ ಪ್ರಾಕೃತಿಕ ಸೌಂದರ್ಯದ ಗಣಿ ಕಾಶ್ಮೀರದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಕಳೆದ ಕೆಲ ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ತಾಣಗಳು ಕಳೆದ 2 ದಿನಗಳಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ. ಪಹಲ್ಗಾಂ ದಾಳಿ ಬೆನ್ನಲ್ಲೇ ಲಕ್ಷಾಂತರ ಜನರು ತಮ್ಮ ಜಮ್ಮು ಕಾಶ್ಮೀರದ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

error: Content is protected !!