ಶ್ರೀನಗರ: ಪಹಲ್ಗಾಮ್ ದಾಳಿ ಬೆನ್ನಲ್ಲೇ ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿದೆ. ಇದೀಗ ಕಾರ್ಯಚರಣೆಯ ಭಾಗವಾಗಿ ಉಗ್ರರ ಸಹಚರರಿಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಭದ್ರತಾ ಸಿಬ್ಬಂದಿ ಇಬ್ಬರನ್ನು ಬಂಧಿಸಿದೆ. ಕುಲ್ಗಾಂ ಜಿಲ್ಲೆಯ ಖೈಮೋಹ್ ಪ್ರದೇಶದ ಥೋಕರ್ಪೋರಾದಿಂದ ಇಬ್ಬರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಬಿತ್ತರಿಸಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಶುಕ್ರವಾರ ಬೆಳಗ್ಗೆ ಪಾಕ್ ಪಡೆಗಳು ಅಪ್ರಚೋದಿತವಾಗಿ ಭಾರತದ ಗಡಿಯತ್ತ ಹಲವು ಗಂಟೆಗಳ ಕಾಲ ಗುಂಡಿನ ದಾಳಿ ನಡೆಸಿದವು. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಕೂಡಾ ದಾಳಿ ನಡೆಸಲಾದ ಪಾಕ್ ಪ್ರದೇಶಗಳತ್ತ ಗುಂಡಿನ ದಾಳಿ ನಡೆಸಿದವು. ಇದಾದ ಬಳಿಕ ಪಾಕ್ ಪಡೆಗಳು ದಾಳಿ ನಿಲ್ಲಿಸಿದವು ಎಂದು ಸೇನಾ ಮೂಲಗಳು ತಿಳಿಸಿವೆ.
ಪಹಲ್ಗಾಂನಲ್ಲಿ ಪ್ರವಾಸಿಗರಿಗೆ ಗುಂಡಿಕ್ಕಿದ್ದ ಉಗ್ರರು ಇದೀಗ ರೈಲ್ವೆ ಮೂಲಸೌಕರ್ಯ, ಕಾಶ್ಮೀರಿ ಪಂಡಿತರು ಮತ್ತು ಸ್ಥಳೀಯರಲ್ಲದವರನ್ನು ಗುರಿಯಾಗಿಸಿ ದಾಳಿ ನಡೆಸಲು ಹೊಂಚು ಹಾಕಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಶ್ರೀನಗರ ಹಾಗೂ ಗಂದರ್ಬಲ್ ಜಿಲ್ಲೆಗಳಲ್ಲಿ ಕಾಶ್ಮೀರಿ ಪಂಡಿತರು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಗುಪ್ತಚರ ಸಂಸ್ಥೆ ಎಚ್ಚರಿಸಿದೆ.ಈ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಭದ್ರತಾ ಸಿಬ್ಬಂದಿಗೆ ತಮ್ಮ ಬ್ಯಾರಕ್‌ನಿಂದ ಅನವಶ್ಯಕವಾಗಿ ಹೊರಬಂದು ಓಡಾಡದಂತೆ ಸೂಚಿಸಲಾಗಿದೆ.