ಸುರತ್ಕಲ್: ಚಾಮರ ಫೌಂಡೇಶನ್ (ರಿ.) ಮತ್ತು ಹಿಂದೂ ವಿದ್ಯಾದಾಯಿನಿ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಲಾದ “ಬೇಸಿಗೆಗೊಂದು ಚಾಮರ 2025” ಶಿಬಿರದ ಐದನೇ ಆವೃತ್ತಿಯ ಸಮಾರೋಪ ಸಮಾರಂಭ ಏಪ್ರಿಲ್ 18 ರಂದು ಹಿಂದೂ ವಿದ್ಯಾದಾಯಿನಿ ಪ್ರೌಢ ಶಾಲೆ, ಸುರತ್ಕಲ್ ನಲ್ಲಿ ನೆರವೇರಿತು.
ಸರಕಾರಿ ಶಾಲಾ ಮಕ್ಕಳಿಗಾಗಿ ಉಚಿತವಾಗಿ ಆಯೋಜಿಸಲಾದ ಈ ಶಿಬಿರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು, ಕಲಿಕೆ, ಕ್ರಿಯಾತ್ಮಕತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ನಂಬಿಗಸ್ತ ವೇದಿಕೆಯಾಗಿತು. ಮುಖ್ಯ ಅತಿಥಿಯಾಗಿ ತುಳು ಹಾಗೂ ಕನ್ನಡ ಚಲನಚಿತ್ರದ ಖ್ಯಾತ ನಟ ವಿನೀತ್ ಕುಮಾರ್ ಭಾಗವಹಿಸಿ, “ಈ ರೀತಿಯ ಶಿಬಿರಗಳು ವಂಚಿತರಾಗುವ ಮಕ್ಕಳಿಗೆ ಅಮೂಲ್ಯ ಅವಕಾಶಗಳನ್ನು ಒದಗಿಸುತ್ತವೆ. ಅವರು ಇಲ್ಲಿ ಪಡೆದ ಅನುಭವಗಳು ಜೀವನದಲ್ಲಿ ಸಹಾಯವಾಗಲಿ,” ಎಂದು ಹೇಳಿದರು.
ನಟ, ನಿರ್ದೇಶಕ ಹಾಗೂ ನಿರೂಪಕ ರಾಹುಲ್ ಅಮೀನ್, ಮತ್ತೊರ್ವ ಅತಿಥಿಯಾಗಿ ಮಾತನಾಡುತ್ತಾ, “ಇಂತಹ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಿಗೆ ಇಂತಹ ವೇದಿಕೆಗಳನ್ನು ಸದ್ಬಳಕೆ ಮಾಡಿ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ,” ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ BASF ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀ ಸಂತೋಷ್ ಪೈ, ಹಿಂದೂ ವಿದ್ಯಾದಾಯಿನಿ ಸಂಘದ PRO ಮತ್ತು ವಿದ್ಯಾದಾಯಿನಿ ಪ್ರೌಢ ಶಾಲೆಯ ಸಂಚಾಲಕ ಶ್ರೀ ಸುಧಾಕರ್ ರಾವ್ ಪೇಜಾವರ್, ಮತ್ತು ಚಾಮರ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಶ್ರೀಮತಿ ರಚನಾ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದಲ್ಲಿ ಭಾಗವಹಿಸಿದ ಪುಟ್ಟ ಮಕ್ಕಳಲ್ಲಿ ಒಬ್ಬಳಾದ ಚಾರುಶ್ರೀ, ಸಮಾರಂಭವನ್ನು ಅತ್ಯಂತ ಕೌಶಲ್ಯದಿಂದ ನಿರೂಪಿಸಿ ಮೆಚ್ಚುಗೆ ಗಳಿಸಿದರು. ಚಾಮರ ಫೌಂಡೇಶನ್ ಟ್ರಸ್ಟಿ ಶ್ರೀ ಮನೀಶ್ ಸಾಲಿಯಾನ್ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಧನ್ಯವಾದಗಳನ್ನು ಸಲ್ಲಿಸಿದರು. ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆದಿತು.
ಏಪ್ರಿಲ್ 12 ರಿಂದ ಪ್ರಾರಂಭಗೊಂಡ ಈ ಶಿಬಿರದಲ್ಲಿ ಕರಣ ಆಚಾರ್ಯ, ವಿಸ್ಮಯ ವಿನಾಯಕ, ಉಡುಪಿಯ ದರ್ಪಣ ತಂಡ, ಶಶಿಧರ್ ಶೆಟ್ಟಿ ಸೇರಿದಂತೆ 22ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ಯೋಗ, ಚಿತ್ರಕಲೆ, ನೃತ್ಯ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
“ಬೇಸಿಗೆಗೊಂದು ಚಾಮರ 2025” ಶಿಬಿರವು ಸಮರ್ಥವಾಗಿ ಮಕ್ಕಳ ಪ್ರತಿಭೆಯನ್ನು ಬೆಳಗಿಸಿ, ಶೈಕ್ಷಣಿಕ ಮತ್ತು ಸೃಜನಾತ್ಮಕ ಚಟುವಟಿಕೆಗೆ ಅನುಕೂಲವಾದ ಒಂದು ಮಾದರಿ ಕಾರ್ಯಕ್ರಮವೆಂದು ಪರಿಗಣಿಸಲಾಯಿತು