ನವದೆಹಲಿ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ. ಕುಲದೀಪ್ ತ್ಯಾಗಿ (46) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್‌ನೋಟ್‌ನಲ್ಲಿ, ‘ನನಗೆ ಕ್ಯಾನ್ಸರ್ ಇತ್ತು. ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂದು ಈ ನಿರ್ಧಾರಕ್ಕೆ ಬಂದೆವು. ಪತ್ನಿ ಅಂಶು ತ್ಯಾಗಿ ಮತ್ತು ನಾನು ಒಟ್ಟಿಗೆ ಇರುವುದಾಗಿ ನಿರ್ಧರಿಸಿದೆವು. ಹೀಗಾಗಿ, ಅವಳನ್ನೂ ಕೊಂದಿದ್ದೇನೆ’ ಎಂದು ಉಲ್ಲೇಖವಾಗಿದೆ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಕುಲದೀಪ್ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ.
ರಾಧಾ ಕುಂಜ್ ಸೊಸೈಟಿಯಲ್ಲಿರುವ ಮನೆಯಲ್ಲಿ ಕುಲದೀಪ್ ತನ್ನ ಪತ್ನಿಯನ್ನು ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದರು. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಸಮಯದಲ್ಲಿ ಅವರ ಪುತ್ರರು ಮನೆಯಲ್ಲಿದ್ದರು. ಗುಂಡೇಟಿನ ಶಬ್ದ ಕೇಳಿ ಕೋಣೆಗೆ ಧಾವಿಸಿದರು. ಕುಲದೀಪ್ ಮೃತದೇಹ ನೆಲದ ಮೇಲೆ ಮತ್ತು ಅಂಶು ಅವರ ಮೃತದೇಹ ಹಾಸಿಗೆಯ ಮೇಲೆ ಬಿದ್ದಿತ್ತು. ತಕ್ಷಣ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಾಗಲೇ ಇಬ್ಬರು ಮೃತಪಟ್ಟಿದ್ದರು.
ಡೆತ್‌ನೋಟ್‌ನಲ್ಲೇನಿತ್ತು?:
ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ. ಆದರೆ, ಈ ವಿಚಾರ ನನ್ನ ಕುಟುಂಬದವರಿಗೆ ತಿಳಿದಿಲ್ಲ. ಬದುಕುಳಿಯುವುದು ಕಷ್ಟ ಎಂದು ತಿಳಿದಿತ್ತು. ನನ್ನ ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂದು ನಾನು ಬಯಸುತ್ತೇನೆ. ಬದುಕಿದರೂ, ಸತ್ತರೂ ನಿನ್ನ ಜೊತೆಯೇ ಎಂದು ಪತ್ನಿ ಹೇಳಿದ್ದಳು. ಹಾಗಾಗಿ, ಇಬ್ಬರೂ ಒಟ್ಟಿಗೆ ಸಾಯಲು ನಿರ್ಧರಿಸಿದ್ದೇವೆ. ನಾನು ನನ್ನ ಹೆಂಡತಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ. ಇದರಲ್ಲಿ ಯಾರೂ ಕೂಡ ತಪ್ಪಿತಸ್ಥರಲ್ಲ ಎಂದು ಡೆತ್‌ನೋಟ್‌ನಲ್ಲಿ ಕುಲದೀಪ್ ಬರೆದಿದ್ದರು.
ಪೊಲೀಸರು ಪಿಸ್ತೂಲನ್ನು ವಶಪಡಿಸಿಕೊಂಡು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.