ಮಂಗಳೂರು: “ಎಪ್ರಿಲ್ 12ರಂದು ಬೆಳಗ್ಗೆ ಮೂಳೂರು ಅಡ್ಡೂರು ಜೋಡುಕರೆ ಕಂಬಳ ಅದ್ಧೂರಿಯಾಗಿ ಆರಂಭಗೊಳ್ಳಲಿದ್ದು ಈ ಬಾರಿಯ ಗುರುಪುರೋತ್ಸವದಲ್ಲಿ ತುಳುನಾಡಿನ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ“ ಎಂದು ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
“ಅನೇಕ ಮೆಡಲ್ ಗಳನ್ನು ಕಂಬಳದಲ್ಲಿ ಗೆದ್ದಿರುವ ದೂಜ ಕೋಣದ ಹೆಸರಿನಲ್ಲಿ ಕಂಬಳದ ಅಂಚೆ ಚೀಟಿ ಬಿಡುಗಡೆ ಮಾಡಲಾಗುವುದು. ಸುಮಾರು 200ರಷ್ಟು ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಭಾಗವಹಿಸುವ ಪ್ರತೀ ಕೋಣಗಳಿಗೆ ಬೆಳ್ಳಿಯ ನಾಣ್ಯ ನೀಡಲಾಗುವುದು“ ಎಂದರು.
ಸಮಿತಿಯ ಗೌರವಾಧ್ಯಕ್ಷ ರಾಜಕುಮಾರ್ ಶೆಟ್ಟಿ ಮಾತಾಡಿ, ”ಕಂಬಳ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಮಳೆ ಬಂದಲ್ಲಿ ಯಾವುದೇ ಸಮಸ್ಯೆ ಬರದಂತೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಅನ್ನದಾನ ವ್ಯವಸ್ಥೆಯಿದೆ. ಈ ವರ್ಷದ ಕೊನೆಯ ಕಂಬಳವನ್ನು ಮಾದರಿಯಾಗಿ ನಡೆಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ, ಗುರುಪುರ ಬ್ಲಾಕ್ ಅಧ್ಯಕ್ಷ ಸುರೇಂದ್ರ ಕಂಬಳಿ, ಮೆಲ್ವಿನ್, ಯಶವಂತ ಶೆಟ್ಟಿ, ಬಿ.ಎಲ್.ಪದ್ಮನಾಭ, ವಿನಯ್ ಶೆಟ್ಟಿ, ಸತೀಶ್ ಶೆಟ್ಟಿ, ಜಯಶೀಲ ಅಡ್ಯಂತಾಯ ಮತ್ತಿತರರು ಉಪಸ್ಥಿತರಿದ್ದರು.