ಕುಖ್ಯಾತ ರೌಡಿ ಶೀಟರ್‌ ನೇಪಾಳಿ ಮಂಜನನ್ನು ಗೆಳೆಯರೇ ಎತ್ತಿಬಿಟ್ಟಿದ್ದು ಯಾಕೆ?

ಆನೇಕಲ್: ಕುಖ್ಯಾತ ರೌಡಿಶೀಟರ್ ನೇಪಾಳಿ ಮಂಜನನ್ನು ಕೊಂದು ಹಾಕಿದ್ದ ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ನೇಪಾಳಿ ಮಂಜನ ಗೆಳೆಯರಾದ ಜಗದೀಶ್, ಮಹೇಶ್, ದಿನೇಶ್, ನಂದನ್, ಮಂಜುನಾಥ್, ರವಿ ಮತ್ತು ಬುಲೆಟ್ ಬಾಬು ಬಂಧಿತ ಆರೋಪಿಗಳು.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿ ಬಳಿ ಮಾ.31 ರಂದು ಯುಗಾದಿ ಹಬ್ಬದ ದಿನವೇ ಆರೋಪಿಗಳು ನೇಪಾಳಿ ಮಂಜನನ್ನು ಹತ್ಯೆ ಮಾಡಿದ್ದರು. ಇನ್ನೂ ನೇಪಾಳಿ ಮಂಜ ಆರೋಪಿಗಳ ಅಣ್ಣನಾದ ಮಹೇಶನ ಕೆನ್ನೆಗೆ ಹೊಡೆದಿದ್ದಕ್ಕೆ ಕೊಲೆ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಹತ್ಯೆಗೀಡಾದ ಮಂಜ ಇಸ್ಪೀಟ್ ಆಡಲು ಮಹೇಶ್ ಬಳಿ 5,000 ರೂ. ಹಣ ಕೇಳಿದ್ದ. ನನ್ನ ಬಳಿ ಹಣ ಇಲ್ಲ ಎಂದು ಆತ ಹೇಳಿದ್ದಕ್ಕೆ ಮಂಜ ಕೆನ್ನೆಗೆ ಹೊಡೆದಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಹಲ್ಲೆಯ ವಿಚಾರ ತಿಳಿದು ಜಗ್ಗ ಸಿಟ್ಟಿಗೆದ್ದು, ನೇಪಾಳಿ ಮಂಜನನ್ನು ಮುಗಿಸಲು ಸಂಚು ರೂಪಿಸಿದ್ದ. ಪ್ಲ್ಯಾನ್‍ನಂತೆ ಆತ ಎಣ್ಣೆ ಪಾರ್ಟಿ ಮಾಡುವ ಸ್ಥಳಕ್ಕೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು, ಪರಾರಿಯಾಗಿದ್ದರು.

ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

error: Content is protected !!