ಬಾಲಿವುಡ್ ನಟ ಸೈಫ್ ಅಲಿ ಖಾನ್‌ ಇರಿತ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಅಗಂತುಕನೊಬ್ಬ ಚಾಕು ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 1000 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದು, 70 ಮಂದಿಯ ಹೇಳಿಕೆಗಳನ್ನು ಚಾರ್ಜ್ ಶೀಟ್ ಒಳಗೊಂಡಿದೆ. ಹಲವು ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳು ಸಹ ಚಾರ್ಜ್ ಶೀಟ್​ನಲ್ಲಿದೆ. ಮಾತ್ರವಲ್ಲದೆ ಪ್ರಕರಣ ಕುರಿತಾಗಿ ಹಲವು ಮಹತ್ವದ ಅಂಶಗಳು, ಸಾಕ್ಷ್ಯಗಳ ಮಾಹಿತಿಗಳನ್ನು ಚಾರ್ಜ್ ಶೀಟ್ ಒಳಗೊಂಡಿದೆ.

ಚಾರ್ಜ್ ಶೀಟ್​ ನಲ್ಲಿ ಅಂದಿನ ಘಟನೆಯ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಜನವರಿ 16 ರಂದು ಆರೋಪಿ ಷರೀಫುಲ್ ಇಸ್ಲಾಂ ಮೊದಲಿಗೆ ಗೇಟ್​ನಿಂದ ಒಳ ಹೋಗುವ ಪ್ರಯತ್ನ ಮಾಡಿದನಂತೆ ಆದರೆ ಅಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದ ಕಾರಣ ಅದು ಸಾಧ್ಯವಾಗಿಲ್ಲ. ಬಳಿಕ ಕಾಂಪೌಂಡ್ ಹಾರಿ ಒಳಗೆ ಹೋಗಿ, ಅಲ್ಲಿ ಏಸಿ ಡಕ್ ಮೂಲಕ ಅಪಾರ್ಟ್​ಮೆಂಟ್ ಒಳಗೆ ಹೋಗಿದ್ದಾನೆ. ಬಳಿಕ ಮೆಟ್ಟಿಲು ಬಳಸಿ ಎಂಟು ಮಹಡಿ ಮೇಲೆ ಏರಿ ಸೈಫ್ ಅಲಿ ಖಾನ್​ರ ಮನೆಯನ್ನು ಕಿಟಕಿ ಮೂಲಕ ಪ್ರವೇಶ ಮಾಡಿದ್ದಾನೆ.

ಮೊದಲಿಗೆ ಸೈಫ್ ಅಲಿ ಖಾನ್​ನ ಮನೆ ಗೆಲಸದ ಮಹಿಳೆಯಾದ ಎಲಿಯಾಮಾ ಫಿಲಿಪ್​ಗೆ ಚಾಕು ತೋರಿಸಿ ಒಂದು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆಗ ಸೈಫ್ ಅಲಿ ಖಾನ್‌ಗೆ ಎಚ್ಚರವಾಗಿ ಬಂದು ಷರೀಫ್ ಅನ್ನು ಹಿಂದಿನಿಂದ ಹಿಡಿದುಕೊಂಡಿದ್ದಾರೆ. ಕೂಡಲೇ ಷರೀಫ್ ತನ್ನ ಬಳಿ ಇದ್ದ ಚಾಕುವಿನಿಂದ ಸೈಫ್​ಗೆ ಮೇಲೆ ಸತತ ದಾಳಿ ಮಾಡಿದ್ದಾನೆ. ನಡೆದ ಘಟನೆಯಿಂದ ಆಘಾತಕ್ಕೆ ಒಳಗಾಗಿ ಅಲ್ಲಿಂದ ಓಡಿ ಪರಾರಿ ಆಗಿದ್ದಾನೆ ಷರೀಫ್.

ಸೈಫ್ ಅಲಿ ಖಾನ್ ಮನೆಯಿಂದ ನ್ಯಾಷನಲ್ ಕಾಲೇಜ್ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿ ಬಟ್ಟೆ ಬದಲಿಸಿ ಬೆಳಿಗಿನ ವರೆಗೆ ನಿದ್ದೆ ಮಾಡಿದ್ದಾನೆ. ಬೆಳಿಗ್ಗೆ ಎದ್ದು ಬಾಂದ್ರಾ ಟರಾವುಗೆ ಹೋಗಿ ಅಲ್ಲಿ ಚಾಕು, ಬಟ್ಟೆ ಎಸೆದಿದ್ದಾನೆ. ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಹೋಗಿ ಅಲ್ಲಿ ಸುಮ್ಮನೆ ಕೆಲ ಕಾಲ ಓಡಾಡಿದ್ದಾನೆ. ಅಲ್ಲಿಂದ ದಾದರ್​ಗೆ ಹೋಗಿ ಒಂದು ಇಯರ್ ಫೋನ್ ಖರೀದಿ ಮಾಡಿದ್ದಾನೆ. ಬುರ್ಜಿ ಪಾವ್ ತಿಂದಿದ್ದಾನೆ. ಅಲ್ಲಿಂದ ವರ್ಲಿಯಲ್ಲಿರುವ ತನ್ನ ಮನೆಗೆ ಹೋಗಿದ್ದಾನೆ.

ಸೈಫ್ ಅಲಿ ಖಾನ್ ಮನೆಯಲ್ಲಿ ಸಿಕ್ಕಿರುವ ಬೆರಳಚ್ಚಿಗೂ, ಆರೋಪಿಯ ಬೆರಳಚ್ಚೂ ಒಂದೇ ಆಗಿದೆ. ಸೈಫ್ ಅಲಿ ಖಾನ್ ದೇಹದಿಂದ ತೆಗೆದ ಚಾಕುವಿನ ತುಂಡು ಮತ್ತು ಆರೋಪಿ ಚಾಕುವನ್ನು ಬಿಸಾಡಿದ್ದ ಜಾಗದಿಂದ ವಶಪಡಿಸಿಕೊಂಡ ಚಾಕುವಿನ ತುಂಡು ಒಂದೇ ಆಗಿದೆ. ಆರೋಪ ಪಟ್ಟಿಯಲ್ಲಿ ನಟಿ ಕರೀನಾ ಕಪೂರ್ ಸೇರಿದಂತೆ ಹಲವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.

error: Content is protected !!