ವಕ್ಫ್‌ ವರದಿಯಿಂದ ತೊಂದರೆಯಾಗಿದೆ, ನಿನ್ನನ್ನು ಬಿಡುವುದಿಲ್ಲ: ಅನ್ವರ್‌ ಮಾಣಿಪ್ಪಾಡಿಗೆ ಜೀವಬೆದರಿಕೆ

ಮಂಗಳೂರು: ಅತ್ತ ಸಂಸತ್ತು ಹಾಗೂ ರಾಜ್ಯಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ಇತ್ತ ವಕ್ಫ್ ಆಸ್ತಿ ಅಕ್ರಮದ ಬಗ್ಗೆ ವರದಿ ನೀಡಿದ್ದ ರಾಜ್ಯ ಅಲ್ಪಸಂಖ್ಯಾತ ಆಯೋಗ ಮತ್ತು ವಕ್ಫ್ ಕಮಿಟಿಯ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ಜೀವ ಬೆದರಿಕೆ ಕರೆಗಳು ಬಂದಿವೆ ಎಂದು ತಿಳಿದುಬಂದಿದೆ.

ನನಗೆ ಎರಡು ದಿನಗಳಿಂದ ನಿರಂತರ ಇಂಟರ್‌ನೆಟ್ ಕರೆ ಮೂಲಕ ಕನ್ನಡ, ಇಂಗ್ಲಿಷ್, ಉರ್ದು, ಮರಾಠಿ ಭಾಷೆಗಳಲ್ಲಿ ಬೆದರಿಕೆ ಕರೆಗಳು ಬರುತ್ತಿದೆ. ನಿನ್ನನ್ನು ಬಿಡುವುದಿಲ್ಲ, ನಿನ್ನ ವರದಿಯಿಂದ ತೊಂದರೆಯಾಗಿದೆ ಎನ್ನುವ ಕರೆಗಳು ಬರುತ್ತಿದೆ. ನೀನು ಬಹಳಷ್ಟು ವ್ಯಕ್ತಿಗಳ ವಿರುದ್ಧ ತಪ್ಪು ಮಾಹಿತಿ ಕೊಟ್ಟಿದ್ದೀಯ. ಇದರಿಂದ ಎಲ್ಲರೂ ನೊಂದಿದ್ದಾರೆ. ಯಾರು ಕೂಡ ನಿನ್ನನ್ನು ಕ್ಷಮಿಸಲ್ಲ. ನಿಮ್ಮನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಅನ್ವರ್ ಮಾಣಿಪ್ಪಾಡಿ ತಿಳಿಸಿದ್ದಾರೆ.

ನನ್ನ ಕಸಿನ್ ಆಗಿರುವ ಪೊಲೀಸ್ ಆಫೀಸರ್ ಒಬ್ಬರು ನನಗೆ ಕರೆ ಮಾಡಿ ಜೋಪಾನವಾಗಿರಪ್ಪ, ಮನೆಯಿಂದ ಹೊರಗಡೆ ಒಬ್ಬನೇ ಹೋಗಬೇಡ ಅಂತ ಸಲಹೆ ನೀಡಿದ್ದಾರೆ ಎಂದು ಮಾಣಿಪ್ಪಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಂಸತ್‌ ಹಾಗೂ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಅನ್ವರ್‌ ಮಾಣಿಪ್ಪಾಡಿ ತಯಾರಿಸಿದ್ದ ವರದಿಯೇ ಕಾರಣ ಎಂದು ಆರೋಪಿಸಿ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ಬೆದರಿಕೆ ಕರೆಗಳು ಬರುತ್ತಿದೆ ಎಂದು ಹೇಳಲಾಗುತ್ತಿದೆ.

 

ಅನ್ವರ್ ಮಾಣಿಪ್ಪಾಡಿ ಅವರು ಸದ್ಯ ಮಂಗಳೂರಿನಲ್ಲಿರುವ ನಿವಾಸದಲ್ಲಿ ವಾಸವಾಗಿದ್ದಾರೆ. ದೂರು ಆಧರಿಸಿದ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

error: Content is protected !!