ಕಾರವಾರ: ಭಾರತೀಯ ನೌಕಾದಳಕ್ಕೆ ಹೊಸ ಯುದ್ಧನೌಕೆ ‘ಐಎನ್ಎಸ್ ಅಂಜದೀಪ್’ ಶುಕ್ರವಾರ(ಫೆ.27) ಅಧಿಕೃತವಾಗಿ ಸೇರ್ಪಡೆಯಾಗಿದ್ದು, ಈ ನೌಕೆಯನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್.ಕೆ.ತ್ರಿಪಾಠಿ ಅವರು ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿದರು.

ಈ ನೌಕೆಗೆ ಕಾರವಾರದ ಅರಬ್ಬೀ ಸಮುದ್ರದಲ್ಲಿರುವ ಪ್ರಸಿದ್ಧ ನಡುಗಡ್ಡೆ ‘ಅಂಜದೀಪ್’ ಎಂದು ಹೆಸರಿಡಲಾಗಿದೆ. ಈ ನಡುಗಡ್ಡೆಗೆ ವಾಸ್ಕೋಡಗಾಮ ಭೇಟಿ ನೀಡಿದ್ದ. ನಂತರ ಇದು ಹಲವು ದಶಕಗಳ ಕಾಲ ಪೋರ್ಚುಗೀಸರ ವಸಾಹತು ಆಗಿತ್ತು. 1961ರಲ್ಲಿ ಭಾರತೀಯ ನೌಕಾಪಡೆ 18 ತಾಸು ಯುದ್ಧ ಮಾಡಿ, ಪೋರ್ಚುಗೀಸರಿಂದ ದೇಶದ ತೆಕ್ಕೆಗೆ ತೆಗೆದುಕೊಂಡಿತ್ತು.

ಗೋವಾ ಪೋರ್ಚುಗೀಸರಿಂದ ಮುಕ್ತವಾದ ಸಮಯದಲ್ಲಿ ‘ಅಂಜದೀಪ್’ ದ್ವೀಪ ಸಹ ಭಾರತದ ತೆಕ್ಕೆಗೆ ಬಂತು. ಇದನ್ನು ವಶಕ್ಕೆ ಪಡೆಯುವ ಹೋರಾಟದಲ್ಲಿ ಭಾರತೀಯ ನೌಕಾಪಡೆಯ 7 ನಾವಿಕರು ಹುತಾತ್ಮರಾಗಿದ್ದರು. ಈ ನೆನಪಿಗಾಗಿ ಯುದ್ಧನೌಕೆಗೆ ‘ಐಎನ್ಎಸ್ ಅಂಜದೀಪ್’ ಎಂದು ನಾಮಕರಣ ಮಾಡಲಾಗಿದೆ.
77 ಮೀಟರ್ ಉದ್ದದ ಈ ನೌಕೆ, ನೌಕಾಪಡೆಯ ಆ್ಯಂಟಿ-ಸಬ್‌ಮೆರಿನ್ ವಾರ್ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ 8 ನೌಕೆಗಳ ಪೈಕಿ 3ನೇಯದು. ‘ಡಾಲ್ಫಿನ್ ಹಂಟರ್’ ಎಂದೇ ಪರಿಚಿತವಾಗಿರುವ ಈ ನೌಕೆ, ಕರಾವಳಿ ಹಾಗೂ ಅಲ್ಪಆಳದ ಸಮುದ್ರ ಪ್ರದೇಶಗಳಲ್ಲಿ ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಸ್ವದೇಶಿ ತಂತ್ರಜ್ಞಾನ ಆಧಾರಿತ ಅತ್ಯಾಧುನಿಕ ಎಎಸ್ ಡಬ್ಲ್ಯೂ ಶಸ್ತ್ರಾಸ್ತ್ರ ಮತ್ತು ಸೆನ್ಸಾರ್ ಪ್ಯಾಕೇಜ್ ಅಳವಡಿಸಲಾಗಿದೆ.