ದೈವ-ದೇವರ ಪೂಜೆಗೆ ಶುದ್ಧ ತೆಂಗಿನ ಎಣ್ಣೆಯನ್ನೇ ಬಳಸಿ

ಕುಟುಂಬದ ಮನೆ, ದೈವಸ್ಥಾನ, ದೇವಸ್ಥಾನ ಇತ್ಯಾದಿ ಕಡೆಗಳಲ್ಲಿ ಪ್ರತಿನಿತ್ಯ, ಸಂಕ್ರಮಣ ಮತ್ತು ಇತರ ಪರ್ವದಿನಗಳಲ್ಲಿ ದೈವ, ದೇವರ ಮುಂದೆ ದೀಪವನ್ನು ಹಚ್ಚಲಾಗುತ್ತದೆ. ಇಲ್ಲಿ ದೀಪದ ಎಣ್ಣೆ ಎಂದು ಬರೆದಿರುವ ಪ್ಯಾಕೇಟ್ ಎಣ್ಣೆಯನ್ನು ಅಂಗಡಿಯಿಂದ ಖರೀದಿಸಿ ತಂದು ಬಳಸುವುದನ್ನು ನಾವು ಕಾಣುತ್ತಿದ್ದೇವೆ. ದೀಪದ ಎಣ್ಣೆ, ಅಡುಗೆ ಎಣ್ಣೆ, ಮೈಗೆ ತಿಕ್ಕುವ, ತಲೆಗೆ ಹಾಕುವ ಎಣ್ಣೆ, ಎಳ್ಳೆಣ್ಣೆ ಎಂದು ಪ್ಯಾಕೇಟ್‌ನಲ್ಲಿ ಬರೆದುಬಿಟ್ಟರೆ ಸಾಕು ನಾವು ಹಿಂದೆ ಮುಂದೆ ನೋಡದೆ ಅದನ್ನು ತಂದು ಬಳಸುತ್ತೇವೆ. ಅದರಲ್ಲಿ ಏನು ಬಳಸಿದ್ದಾರೆ ಎಂಬುದನ್ನು ನೋಡುವುದರ ಗೋಜಿಗೆ  ಹೋಗುವುದಿಲ್ಲ.

ಅಗರ ಬತ್ತಿ ಎಂದು ಚೀನಾದಿಂದ ಬಂದ, ಕೆಮಿಕಲ್ ಕಡ್ಡಿಗಳನ್ನು ಇಲ್ಲಿನ ವ್ಯಾಪಾರಿಗಳು ಅಯ್ಯಪ್ಪ, ಸ್ಕಂದ, ಸುಬ್ರಹ್ಮಣ್ಯ, ದೇವಿ ಎಂದೆಲ್ಲಾ ಭಾವಚಿತ್ರ ಹಾಕಿದ ಪೊಟ್ಟಣದಲ್ಲಿ ತುಂಬಿಸಿ ಮಾರುತ್ತಾರೆ. ಅದನ್ನು ನಾವು ಭಕ್ತಿ ಭಾವದಿಂದ ದೇವರ ಮುಂದೆ ಮನೆ ಇಡೀ, ದೇವರ ಕೋಣೆಯಲ್ಲಿ ಬಳಸಿ ಇಲ್ಲ ಸಲ್ಲದ ಶ್ವಾಸಕೋಶದ ರೋಗಗಳಿಗೆ ಗೊತ್ತಿಲ್ಲದೇ ಬಲಿಯಾಗುತ್ತಿದ್ದೇವೆ. ಶ್ರೀಗಂಧ ಅರೆಯುವುದಕ್ಕೆ ಜನ ಇಲ್ಲ ಎಂದು ಎಂದು ಯಾವುದೋ ಅಗ್ಗದ ಕೆಮಿಕಲ್, ಮಾತ್ರೆ, ಮರದ ಪುಡಿಯ ಉಂಡೆಗಳನ್ನು ಕಲಸಿ ಗಂಧ ಎಂದು ಹಣೆಗೆ ಹಚ್ಚಿಕೊಳ್ಳುತ್ತಿದ್ದೇವೆ. ದೈವ ‘ಉಡಲ್‌ಗ್ ದೆತೊನೊಡು’ ಎಂದರೆ ಏಳು, ಹನ್ನೊಂದು, ಇಪ್ಪತ್ತೊಂದು ದಿವಸ ಭಕ್ತಿಪೂರ್ವವಕವಾಗಿ ಸೇವಿಸಿ ನಾನಾ ರೋಗಕ್ಕೆ ಈಡಾಗುತ್ತಿದ್ದೇವೆ. ಮಾರಕ ಕೆಮಿಕಲ್ ಕೆಂಪು ಪುಡಿಯನ್ನು ಕುಂಕುಮ ಎಂದು ಧರಿಸಿ ಅಲರ್ಜಿಗೆ ಒಳಗಾಗುತ್ತಿದ್ದೇವೆ. ಇದನ್ನೆಲ್ಲಾ ನೇರವಾಗಿ ಹೇಳಿದರೆ ಅಧಿಕ ಪ್ರಸಂಗಿ, ನಾಸ್ತಿಕ, ದೈವ-ಧರ್ಮ ದ್ರೋಹಿ ಎಂದು ಅನ್ನಿಸಿಕೊಳ್ಳುತ್ತಿದ್ದೇವೆ.

ನೇರವಾಗಿ ತೆಂಗಿನ ಎಣ್ಣೆಯ ಬಗ್ಗೆಯೇ ಹೇಳುವುದಾದರೆ ನಾವು ಗಾಣದಲ್ಲಿ ಮಾಡಿಸಿದ ಶುದ್ಧ ಕೊಬ್ಬರಿ ಎಣ್ಣೆಯ ಬೆಲೆ ಮತ್ತು ಅಂಗಡಿಯಲ್ಲಿ ಮಾರಾಟವಾಗುವ ಎಣ್ಣೆಯ ಬೆಲೆಯನ್ನು ತುಲನೆ ಮಾಡಿ ನೋಡಬಹುದು. ಶುದ್ಧ ಕೊಬ್ಬರಿ ಎಣ್ಣೆಯ ಬೆಲೆಗಿಂತ ಗಮನೀಯ ಪ್ರಮಾಣದಲ್ಲಿ ಅಂಗಡಿಯಲ್ಲಿ ಸಿಗುವ ಪ್ಯಾಕೇಟ್ ಬೆಲೆ ಕಡಿಮೆ ಇದೆ. ಇವರು ಯಾಕೆ ಇಷ್ಟು ನಷ್ಟಮಾಡಿ ಮಾರಾಟ ಮಾಡಿಕೊಳ್ಳುತ್ತಾರೆ?

ಯಾವುದೇ ಎಣ್ಣೆಯ ಕಾಲು ಭಾಗಕ್ಕೆ ಪೆಟ್ರೋಕೆಮಿಕಲ್‌ನ ಒಂದು ಉತ್ಪಾದನೆಯಾದ ಕೆಮಿಕಲ್ ಅಂಗಡಿಗಳಲ್ಲಿ ಅರುವತ್ತು ರೂಪಾಯಿ ಲೀಟರ್‌ಗೆ ಸಿಗುವ ಒಂದು ಬಿಳಿ ಲಿಕ್ವಿಡ್‌ನ್ನು ಮುಕ್ಕಾಲು ಭಾಗ ಸೇರಿಸಿದರೆ ಅದು ಅದೇ ಎಣ್ಣೆಯ ಪರಿಮಳವನ್ನು ಪಡೆಯುತ್ತದೆ!. ತೆಂಗಿನ ಎಣ್ಣೆ ಮಾತ್ರವಲ್ಲ ಎಲ್ಲಾ ಎಣ್ಣೆಯ ಅವಸ್ಥೆಯೂ ಇದೇ ಆಗಿದೆ.  ಕೆಲವು ದೀಪದ ಎಣ್ಣೆಯನ್ನು ಹೊಟೇಲುಗಳಲ್ಲಿ ವಿವಿಧ ಪದಾರ್ಥ, ಮಾಂಸ, ಮೀನು ಇತ್ಯಾದಿಯನ್ನು ಕರಿದ ಕಪ್ಪು ಎಣ್ಣೆಯನ್ನು ಖರೀದಿಸಿ ಅದನ್ನು ಸಂಸ್ಕೃರಿಸಿ, ವಾಸನೆ ತೆಗೆದು ಆಕರ್ಷಕ ಪ್ಯಾಕೆಟ್‌ಗಳಲ್ಲಿ ತುಂಬಿಸಿ ಮಾರಾಟ ಮಾಡುವ ಜಾಲವೂ ಇದೆ. ,ಇದನ್ನು ನಾವು ದೇವರ ಮುಂದೆ ಹಚ್ಚಬೇಕೇ?

Health Benefits of Coconut Oil : ತೆಂಗಿನೆಣ್ಣೆ ಅಡುಗೆಯಲ್ಲಿ ಬಳಸುವುದು ಆರೋಗ್ಯಕರವೇ? - Kannada BoldSky

ತೆಂಗಿನ ಮರ ಕಲ್ಪವೃಕ್ಷ ಎಂದು ಕರೆಯಲ್ಪಡುತ್ತದೆ. ತೆಂಗಿನ ಕಾಯಿಯ ಒಳಗಿರುವ ನೀರನ್ನು ಭಗವಂತ ನಮಗಾಗಿ ಕಳುಹಿಸಿದ ಅಮೃತ ಎಂದು ಭಾವಿಸಲಾಗುತ್ತದೆ. ತೆಂಗಿನಕಾಯಿ ಪವಿತ್ರವಾದ ಒಂದು ಫಲ. ಹೆಚ್ಚು ಕಡಿಮೆ ಎಲ್ಲಾ ಕುಟುಂಬದ ಮನೆಗಳಲ್ಲಿ ಒಂದೆರಡಾದರೂ ತೆಂಗಿನ ಮರ ಇರುತ್ತದೆ. ದೇವಸ್ಥಾನಗಳಿಗೆ ಭಕ್ತರು ತೆಂಗಿನ ಕಾಯಿಯನ್ನು ಕಾಣಿಕೆ ರೂಪದಲ್ಲಿ ತಂದು ಕೊಡುತ್ತಾರೆ. ಇದನ್ನೆಲ್ಲಾ ಒಣಗಿಸಿ ಕೊಬ್ಬರಿ ಮಾಡಿ ಎಣ್ಣೆಯ ಗಿರಣಿಗೆ ಕೊಟ್ಟು ಶುದ್ಧ ಎಣ್ಣೆಯನ್ನು ಕಣ್ಣಮುಂದೆಯೇ ಮಾಡಿಸಿ ತರಬಹುದಾಗಿದೆ. ಈ ಎಣ್ಣೆಯನ್ನು ದೈವ ಮತ್ತು ದೇವತಾ ಕಾರ್ಯಗಳಿಗೆ ಬಳಸುವುದರಿಂದ ಯಾವ ತೊಂದರೆಯೂ ಬರುವುದಿಲ್ಲ. ನಾವು ನಮ್ಮ ಕೈಯಾರೆ ತಯಾರಿಸಿದ ಶುದ್ಧ ಎಣ್ಣೆಯ ದೀಪದಿಂದ ದೈವ ದೇವರ ಮುಂದೆ ದೀಪ ಬೆಳಗಿ ಪೂಜೆ ಮಾಡಿದಂತಾಗುತ್ತದೆ. ಶುದ್ಧ ದೀಪದ ಎಣ್ಣೆಯ ಒಂದು ಕಾಲ ಇತ್ತು ನಿಜ. ಕಣ್ಣಿಗೆ, ಆರೋಗ್ಯಕ್ಕೆ, ಪರಿಸರಕ್ಕೆ ಉತ್ತಮವಾಗಿದ್ದ ‘ಪೊನ್ನೆದ ಎಣ್ಣೆ’ಯನ್ನು ಎಲ್ಲಾ ದೇವತಾ ಕಾರ್ಯಗಳಿಗೆ ಬಳಸಲಾಗುತ್ತಿತ್ತು.   ದುರ್ದೈವದಿಂದ ಅದರ ಕಾಲ ಮುಗಿದು ಹೋಗಿದೆ. ಆದರೆ ಈಗ ದೀಪದ ಎಣ್ಣೆ, ಎಳ್ಳೆಣ್ಣೆ ಎಂದು ಬರೆದ ಮಾತ್ರಕ್ಕೆ ಆ ಪ್ಯಾಕೆಟ್ ಎಣ್ಣೆಯನ್ನು ಹಿಂದೆ ಮುಂದೆ ನೋಡದೆ ತಂದು ದೈವ ದೇವರ ಮುಂದೆ, ದೇವಸ್ಥಾನ, ದೈವಸ್ಥಾನಗಳಲ್ಲಿ ದೀಪವನ್ನು ಬೆಳಗಿಸಿ ದೈವದೇವರ ಗುಡಿಯ ಚಾವಣಿ, ಮುಗ-ಮೂರ್ತಿ, ಅಯುಧಗಳು ಹೊಗೆ ಹಿಡಿದು ಕಪ್ಪಾಗುವ ಮತ್ತು ಅಲ್ಲಿ ನೆರೆದ ಭಕ್ತರ ಆರೋಗ್ಯಕ್ಕೆ ಹಾನಿಯಾಗುವ ಕೆಲಸವನ್ನು ನಾವು ಮಾಡಬೇಕೇ?

ಅಮೃತದಂತಹ ಎಣ್ಣೆ ಬಳಿ ಇದ್ದರೂ ಹೆಚ್ಚಿನವರಿಗೆ ವಿಷಕಾರಿ ಅಂಗಡಿಯ ಪ್ಯಾಕೆಟ್ ಎಣ್ಣೆಯನ್ನೇ ಬಳಸುವುದರಿಂದ ಹೆಚ್ಚು ಪುಣ್ಯ ಎಂಬ ಭಾವನೆ ಇದೆ. ಇದು ಎಷ್ಟು ಸರಿ?. ಎಲ್ಲರೂ ಅದನ್ನೇ ಮಾಡುತ್ತಿದ್ದಾರೆ ಎಂದು ನಾವು ಕೂಡಾ ಅದನ್ನೇ ಮಾಡುತ್ತಿದ್ದೇವೆ!

ತೆಂಗಿನ ಕಾಯಿ ಸಿಪ್ಪೆ ಸುಲಿದು, ಒಣಗಿಸಿ ಕೊಬ್ಬರಿ ಮಾಡಲು ಸಮಯ ಇಲ್ಲದೇ ಇದ್ದರೆ ಇಡೀ ತೆಂಗಿನ ಕಾಯಿಯನ್ನೇ ವಿಶ್ವಾಸಾರ್ಹ ಗಿರಣಿಗೆ ಕೊಂಡೊಯ್ದು ಅದರ ಬೆಲೆಯ ಶುದ್ಧ ತೆಂಗಿನ ಎಣ್ಣೆಯನ್ನು ತರುವುದಕ್ಕೆ ಸಾಧ್ಯವಿದೆ.

ಈಗ ಬ್ರಾಂಡೆಡ್ ಎನ್ನಲಾಗುವ ರಿಫೈನ್ಡ್, ಡಬ್ಬಲ್ ರಿಫಾಯಿನ್ಡ್ ಪ್ಯಾಕೆಟ್ ಎಣ್ಣೆಗಳ ಬಗ್ಗೆ ಜನರ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆ. ಸಣ್ಣ ವಯಸ್ಸಿನವರು ಹೃದಯಾಘಾತಕ್ಕೆ ಒಳಗಾಗುವುದು ಇಂತಹ ತೈಲಗಳಿಂದ ಎಂದು ಮನವರಿಕೆಯಾಗಿದೆ. ಶುದ್ಧ ತೆಂಗಿನ, ಸಾಸಿವೆ, ಕಡಲೆ, ಎಳ್ಳು ಇತ್ಯಾದಿ ಇತ್ಯಾದಿ ಎಣ್ಣೆಗಳಿಗೆ ಮುಗಿಬಿದ್ದು ದುಬಾರಿ ದರ ಇದ್ದರೂ ಖರೀದಿಸುವವರು ಇದ್ಧಾರೆ. ಹಾಗಿರುವಾಗ ನಮ್ಮ ತುಳುನಾಡಿಗೆ ದೈವ ದೇವರುಗಳು ಕಲ್ಪವೃಕ್ಷವನ್ನು ಕರುಣಿಸಿ ಅದರ ಫಲದಿಂದ ಶುದ್ಧತೆಯನ್ನು ಕಾಪಾಡಿಕೊಳ್ಳುವುದನ್ನು ಸಾರಿ ಸಾರಿ ಹೇಳುತ್ತಿದ್ದರೂ ನಾವೇಕೆ ಮೂರ್ಖರಂತೆ ವರ್ತಿಸುತ್ತಿದ್ದೇವೆ? ತೆಂಗಿನ ಎಣ್ಣೆಯಲ್ಲಿ ದೀಪ ಉರಿಸಬಾರದು ಎಂದು ಯಾವ ದೈವ, ದೇವರು ಹೇಳಿದ್ದಾರೆ? ಹೇಳಿ.

error: Content is protected !!