ಚೆನ್ನೈ: ವರಿಷ್ಠರು ನೀಡಿದ ಸೂಚನೆಗೆ ಓಗೊಟ್ಟ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆ.ಅಣ್ಣಾಮಲೈ ಅವರು ತಮ್ಮ ಸ್ಥಾನಕ್ಕೆ ಕೊನೆಗೂ ರಾಜೀನಾಮೆ ಘೋಷಿಸಿದ್ದಾರೆ. ಈ ಕುರಿತು ಕೊಯಮತ್ತೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷರ ಹುದ್ದೆಗೆ ನಾನು ಸ್ಪರ್ಧೆ ಮಾಡಲ್ಲ. ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ನಾನು ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿಲ್ಲ ಎಂದು ಹೇಳಿದ್ದಾರೆ.
ಪಕ್ಷಕ್ಕೆ ಉಜ್ವಲ ಭವಿಷ್ಯ ಇರಬೇಕೆಂದು ನಾನು ಬಯಸುತ್ತೇನೆ. ಅನೇಕ ನಾಯಕರು ಬಿಜೆಪಿ ಬೆಳವಣಿಗೆಗಾಗಿ ತಮ್ಮ ಪ್ರಾಣವನ್ನೇ ನೀಡಿದ್ದಾರೆ. ನಾನೂ ಸಹ ಈ ಪಕ್ಷಕ್ಕೆ ಒಳ್ಳೆಯದನ್ನೇ ಬಯಸುತ್ತೇನೆ. ಹಾಗಾಗಿ ಈ ಬಾರಿ ನಾನು ಪಕ್ಷದ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಇಲ್ಲ. ನಾವೆಲ್ಲರೂ ಒಟ್ಟಾಗಿ ಸೇರಿ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತೇವೆ. ಇದರ ಹೊರತಾಗಿ ನಾನು ಯಾವುದೇ ರಾಜಕೀಯ ಊಹಾಪೋಹಗಳಿಗೆ ಉತ್ತರ ಕೊಡಲ್ಲ ಅಂತ ತಿಳಿಸಿದ್ದಾರೆ.
ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ. ಪ್ರತಿ ಪಕ್ಷಗಳಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ 50 ಜನ ನಾಮಪತ್ರ ಸಲ್ಲಿಸುತ್ತಾರೆ. ಆದ್ರೆ ನಮ್ಮಲ್ಲಿ ಒಗ್ಗಟ್ಟಿನಿಂದ ಅಧ್ಯಕ್ಷರನ್ನ ಆಯ್ಕೆ ಮಾಡುತ್ತೇವೆ ಅಂತ ಅಣ್ಣಾಮಲೈ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
2023 ರಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ವಿಭಜನೆಯಾಗಲು ಅಣ್ಣಾಮಲೈ ಕಾರಣ ಎನ್ನಲಾಗಿತ್ತು. ಇದೀಗ ಪಕ್ಷಗಳ ನಡುವಿನ ಮೈತ್ರಿ ಮಾತುಕತೆಗಳು ಚುರುಕುಗೊಂಡ ಹಿನ್ನೆಲೆ ಅಣ್ಣಾಮಲೈ ಬಿಜೆಪಿ ತಮಿಳುನಾಡು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ರಾಜ್ಯದಲ್ಲಿ ಬಿಜೆಪಿ ತನ್ನ ಹೆಜ್ಜೆಗುರುತು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಜಾತಿ ಸಮೀಕರಣಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.