ಹಿಂಸಾತ್ಮಕವಾಗಿ ಗೋವು ಸಾಗಿಸಿ, ಬಜರಂಗಿಗಳನ್ನು ಕಂಡು ಪರಾರಿಯಾಗಿದ್ದ ಐವರು ಆರೋಪಿಗಳು ಸೆರೆ

ಮಂಗಳೂರು: ಹಿಂಸಾತ್ಮಕವಾಗಿ ಬರೋಬ್ಬರಿ 19 ಗೋವುಗಳನ್ನು ಪಿಕಪ್ ವಾಹನದಲ್ಲಿ ಹೇರಿಕೊಂಡು ಕಸಾಯಿಖಾನೆಗೆ ಸಾಗಿಸುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು ತಡೆದು ನಿಲ್ಲಿಸಿದಾಗ ಓಡಿ ಪರಾರಿಯಾಗಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿಯ ಮಹಮ್ಮದ್ ತೌಸಿಫ್(26), ಫಾರಿಸ್ ಸಲಾಂ(26), ತೋಕೂರಿನ ಅರಾಫತ್ ಆಲಿ(36), ಮಹಮ್ಮದ್ ಅಫ್ರೀದ್(31) ಹಾಗೂ ಮೂಡುಬಿದ್ರೆಯ ಅಬ್ದುಲ್ ನಜೀರ್(31) ಬಂಧಿತ ಆರೋಪಿಗಳು.

ಮಾ.28ರಂದು ಪಿಕಪ್ ವಾಹನದಲ್ಲಿ 19 ಗೋವುಗಳನ್ನು ಹೇರಿಕೊಂಡು ಅದರ ಹಿಂಭಾಗದಲ್ಲಿ ಬೊಲೆರೋ ವಾಹನದಲ್ಲಿದ್ದವರು ಬೆಂಗಾವಲು ನೀಡುತ್ತಿದ್ದರು. ಬಜರಂಗದಳದ ಕಾರ್ಯಕರ್ತರು ಈ ವಾಹನವನ್ನು ಬೆನ್ನತ್ತಿದ್ದಾಗ ಎಡಪದವು ಭಾಗದಲ್ಲಿ ಬಜರಂಗ ದಳದ ಕಾರ್ಯಕರ್ತರಿಗೆ ಗನ್‌ ತೋರಿಸಿ ಬೆದರಿಸಿದ್ದರು ಎಂಬ ಆರೋಪ ಮಾಡಿದ್ದರು. ಇದನ್ನು ಶಾಸಕ ಭರತ್‌ ಶೆಟ್ಟಿ ವೈ ಕೂಡಾ ಖಂಡಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದು ಮಂಗಳೂರಿನ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಸ್ಪಷ್ಟನೆ ನೀಡಿದ್ದರು.


ಅಂದು ಬಜರಂಗಿಗಳಿಂದ ಒಟ್ಟು 19 ಗೋವುಗಳು ರಕ್ಷಿಸಲ್ಪಟ್ಟಿದ್ದು, ಎರಡು ಗೋವುಗಳು ಸಾವನ್ನಪ್ಪಿದ್ದವು. ಈ ಗೋವುಗಳನ್ನು ಸೂರಲ್ಪಾಡಿಯ ಅಕ್ರಮ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು.

error: Content is protected !!